ದುಬೈ: ಅಂಡರ್ 19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 43 ರನ್‌ಗಳ ಅಂತರದಿಂದ ಸೋಲನುಭವಿಸಿದೆ.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತು. ಪಾಕಿಸ್ತಾನದ ಪರ ಶಹಜೈಬ್ ಖಾನ್ 159 ರನ್ ಗಳಿಸಿದರೆ, ಉಸ್ಮಾನ್ ಖಾನ್ 60 ರನ್ ಗಳಿಸಿದರು. ಭಾರತದ ಪರ ಸಮರ್ಥ್ ನಾಗರಾಜ್ 3 ಮತ್ತು ಆಯುಶ್ ಮಹತ್ರೆ 2 ವಿಕೆಟ್ ಪಡೆದರು.
ಪಾಕಿಸ್ತಾನದ ನೀಡಿದ 282 ರನ್ ಗುರಿ ಬೆನ್ನತ್ತಿದ ಭಾರತ ತಂಡ 47.1 ಓವರ್ ಗಳಲ್ಲಿ 237 ರನ್ ಗಳಿಸಿ ಆಲೌಟಾಯಿತು. ಐಪಿಎಲ್ ಮೆಗಾ ಹರಾಜಿನಲ್ಲಿ 1.1 ಕೋಟಿಗೆ ಸೇಲ್ ಆಗುವ ಮೂಲಕ ಭಾರಿ ಸುದ್ದಿಯಲ್ಲಿರುವ 13 ವರ್ಷದ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಆಡಿದ್ದರು. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ವೈಭವ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆರಂಭಿಕರಾಗಿ ಕಣಕ್ಕಿಳಿದ ವೈಭವ್ 9 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಭಾರತ ತಂಡದ ಪರ ನಿಖಿಲ್ ಕುಮಾರ್ 67 ರನ್ ಗಳಿಸಿದರು. ಇನಿಂಗ್ಸ್ ಕೊನೆಯಲ್ಲಿ ಮೊಹಮ್ಮದ್ ಎನಾನ್ 30 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾಗೆ ಗೆಲುವು ತಂದುಕೊಡುವ ಪ್ರಯತ್ನ ಮಾಡಿದರು. ಆದರೆ ಅವರು ರನ್‌ಔಟ್ ಆದ ಹಿನ್ನೆಲೆಯಲ್ಲಿ ಭಾರತ ತಂಡ 237 ರನ್‌ಗೆ ಆಲೌಟಾಗಿ ಸೋಲನುಭವಿಸಿತು.
ಭಾರತ ತಂಡ ಡಿಸೆಂಬರ್ 2 ರಂದು ಜಪಾನ್ ಅಂಡರ್ 19 ತಂಡದ ವಿರುದ್ಧ ಎರಡನೇ ಪಂದ್ಯವನ್ನಾಡಲಿದೆ.