ಇಸ್ಲಾಮಾಬಾದ್: ಚಾಂಪಿಯನ್ಸ್ ಟ್ರೋಫಿ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ನಡುವೆ ಜಟಾಪಟಿ ಜೋರಾಗಿದೆ. ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ತಂಡ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ಇಲ್ಲಿ ಬರದಿದ್ದರೆ ಪಾಕಿಸ್ತಾನ ತಂಡ ಸಹ ಭಾರತದಲ್ಲಿ ಆಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ನಿನ್ ನಖ್ವಿ ತಿಳಿಸಿದ್ದಾರೆ.
ಪಾಕ್ ಮಾಧ್ಯಮದ ಜತೆ ಮಾತನಾಡಿದ ಮೊಹ್ಸಿನ್ ನಖ್ವಿ, ಭದ್ರತೆಯ ಕಾರಣದಿಂದ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ನಾವು ಸಹ ಮುಂದಿನ ದಿನಗಳಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಟೂರ್ನಿಯ ಪಂದ್ಯವನ್ನಾಡಲು ಭಾರತಕ್ಕೆ ನಮ್ಮ ತಂಡವನ್ನು ಕಳುಹಿಸುವುದಿಲ್ಲ. ನಮಗೂ ಭದ್ರತೆಯ ಕೊರತೆ ಕಾಡಲಿದೆʼ ಎಂದು ಹೇಳಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ತನ್ನ ನಿಲುವನ್ನು ಐಸಿಸಿಗೆ ತಿಳಿಸಿದ ನಂತರ ಚಾಂಪಿಯನ್ಸ್ ಟ್ರೋಫಿಯ ಭವಿಷ್ಯವು ಅನಿಶ್ಚಿತವಾಗಿದೆ. ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಜಾಗತಿಕ ಕ್ರಿಕೆಟ್ ಸಂಸ್ಥೆ ತನ್ನ ಕಾರ್ಯಕಾರಿ ಮಂಡಳಿಯ ಸದಸ್ಯರ ವರ್ಚುವಲ್ ಸಭೆಯನ್ನು ಶುಕ್ರವಾರ ನಿಗದಿಪಡಿಸಿದೆ. ಈ ಸಭೆಗೂ ಮುನ್ನವೇ ಮೊಹ್ಸಿನ್ ನಖ್ವಿ ಈ ಹೇಳಿಕೆ ನೀಡಿದ್ದಾರೆ.
ಇನ್ನು ಪಾಕಿಸ್ತಾನದಲ್ಲಿ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಎ ತಂಡ ಅರ್ಧದಲ್ಲೇ ಸರಣಿಯನ್ನು ಮೊಟಕುಗೊಳಿಸಿ ವಾಪಸ್ ತೆರಳಿದೆ. ಪಾಕಿಸ್ತಾನದಲ್ಲಿ ಅಶಾಂತಿ ಮನೆಮಾಡಿರುವ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಪಾಕ್ ಬಳಿಯೇ ಉಳಿಯುತ್ತಾ ಅನ್ನೋದು ಶುಕ್ರವಾರದ ಸಭೆಯಲ್ಲಿ ತೀರ್ಮಾನವಾಗಲಿದೆ.