ಬಾಗಲಕೋಟೆ : ಡಿಕೆಶಿಗೆ ಕೊಟ್ಟಿರೋ ಡಿಸಿಎಂ ಹುದ್ದೆ ಕಿರೀಟ್ ಅಲ್ಲ ಎಂಬ ರಾಜಣ್ಣ ಹೇಳಿಕೆ ವಿಚಾರಕ್ಕೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ರಾಜಣ್ಣ ಏನು ಹೇಳಿದ್ದಾರೆ ಅಂತ ಅವ್ರನ್ನೇ ಕೇಳ್ವೇಕು. ಆದರೆ ಈ ರೀತಿಯ ಚರ್ಚೆ ಬಹಿರಂಗ ಆಗುವಂತದ್ದು ಸರಿ ಅಲ್ಲ. ಪಕ್ಷದ ಹೈಕಮಾಂಡ್ ಎಲ್ಲವನ್ನೂ ನೋಡ್ತಿದೆ. ಮುಂದೆ ಏನೇನೂ ತೀರ್ಮಾನ ತಗೋಬೇಕು ತಗೋತಾರೆ. ರಾಜಣ್ಣವ್ರ ಒಂದ ಇರಬಹುದು, ನನ್ನ ಅಭಿಪ್ರಾಯ ಒಂದಿರಬಹುದು. ಅದೇನೇ ಇರಲಿ ಇದು ಅನಾವಶ್ಯಕ ಚರ್ಚೆ ಎಂದರು.
ಸಿಎಂ ಬೆಂಬಲಿಸಿ ಅಹಿಂದ ಸಚಿವರ ಹೇಳಿಕೆ ವಿಚಾರಕ್ಕೂ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ಕ್ಷೇತ್ರದಲ್ಲಿ ಪೈಪೋಟಿ ಇದ್ದೇ ಇರುತ್ತೆ. ಪೈಪೋಟಿ ಇರಬೇಕು, ಪೈಪೋಟಿ ಇಲ್ಲದೇ ರಾಜಕೀಯ ಮಾಡೋಕ್ಕೆ ಆಗಲ್ಲ. ಎಲ್ಲರಿಗೂ ಅವರದ್ದೇ ಆದ ಆಸೆಗಳಿರುತ್ತೆ. ಆಸೆಗಳು ಇದ್ದಾಗಲೇ ತಾನೇ ಏನಾದ್ರೂ ಆಗಬೇಕು ಅಂತ ರಾಜಕೀಯಕ್ಕೆ ಬರೋದಲ್ವಾ? ಜನರ ಸೇವೆ ಜೊತೆ ಒಳ್ಳೆ ಸ್ಥಾನಕ್ಕೆ ಹೋಗುವ ಆಸೆ ಇರುತ್ತೆ. ನಮ್ಮ ಪಕ್ಷದಲ್ಲಿ ಇದೇನು ದೊಡ್ಡ ವಿಚಾರ ಅಲ್ಲ, ಇದರಿಂದ ಪಕ್ಷದಲ್ಲಿ ಬಿರುಕಿದೆ ಅಂತಲ್ಲ. ಯಾರೋ ಕೆಲವ್ರು ತಮ್ಮ ಅಭಿಪ್ರಾಯ ತಿಳಿಸ್ತಾರೆ. ಅವರವರ ಮಧ್ಯೆ ಪ್ರತಿಷ್ಠೆ ಆಗಿದೆ ಹೊರತು ಏನೂ ಇಲ್ಲ. ಬಿಜೆಪಿ ಪಕ್ಷ ಬಿರುಕು ಬಿಟ್ಟು ಪರಸ್ಪರ ದ್ವೇಷ ಸಾಧಿಸುವ ಪಕ್ಷ ಆಗಿದೆ. ನಮ್ಮಲ್ಲಿ ಆ ರೀತಿ ಇಲ್ಲ. ಒಂದು ಸಣ್ಣ ವಿಷಯ ಸೂಕ್ತ ರೀತಿಯಲ್ಲಿ ಇತ್ಯರ್ಥ ಆಗುತ್ತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.