ಮಾಸ್ಕೋ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತದಲ್ಲಿ ಹೂಡಿಕೆ ಮಾಡಲು ರಷ್ಯಾ ಸಿದ್ಧವಿದೆ ಎಂದು ತಿಳಿಸಿದ್ಧಾರೆ.
ಮಾಸ್ಕೋದಲ್ಲಿ ವಿಟಿಬಿ ಹೂಡಿಕೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಭಾರತದ `ಮೇಕ್ ಇನ್ ಇಂಡಿಯಾ’ ಯೋಜನೆ ಬಗ್ಗೆ ಪುಟಿನ್ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ʼಮೇಕ್ ಇನ್ ಇಂಡಿಯಾʼ ಯೋಜನೆಗಾಗಿ ರಷ್ಯಾ ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಸಿದ್ಧವಾಗುತ್ತಿದೆ. ಇದಕ್ಕೆಲ್ಲಾ ಭಾರತದ ನಾಯಕತ್ವವೇ ಕಾರಣ. ಹೀಗಾಗಿ, ಭಾರತವು ತನ್ನ ಹಿತಾಸಕ್ತಿಗಳ ಈಡೇರಿಕೆಗಾಗಿ ಹೆಚ್ಚಿನ ಆದ್ಯತೆ ನೀಡುತ್ತದೆ. ಭಾರತದಲ್ಲಿನ ಹೂಡಿಕೆಗಳು ಲಾಭದಾಯಕವೆಂದು ನಾವು ನಂಬುತ್ತೇವೆ ಎಂದು ತಿಳಿಸಿದರು.
ಗ್ರಾಹಕ ಸರಕುಗಳು, ಐಟಿ, ಉನ್ನತ ತಂತ್ರಜ್ಞಾನ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಷ್ಯಾದ ಸಾಧನೆಯನ್ನು ಉಲ್ಲೇಖಿಸಿ, ಪಾಶ್ಚಾತ್ಯ ಬ್ರಾಂಡ್ಗಳನ್ನು ಬದಲಿಸುವ ಮೂಲಕ ಹೊಸ ರಷ್ಯಾದ ಬ್ರ್ಯಾಂಡ್ಗಳು ಯಶಸ್ಸು ಗಳಿಸಿವೆ ಎಂದು ಪುಟಿನ್ ತಿಳಿಸಿದರು. ಇದೇ ವೇಳೆ, ಉದ್ಯಮಗಳ ಬೆಳವಣಿಗೆಯನ್ನು ಬೆಂಬಲಿಸಲು ಬ್ರಿಕ್ಸ್ ರಾಷ್ಟ್ರಗಳ ಸಹಕಾರಕ್ಕಾಗಿ ಪುಟಿನ್ ಕರೆ ನೀಡಿದರು. ಮುಂದಿನ ವರ್ಷ ಬ್ರೆಜಿಲ್ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಸಹಯೋಗಕ್ಕಾಗಿ ಪ್ರಾಥಮಿಕ ಕ್ಷೇತ್ರಗಳನ್ನು ಮೌಲ್ಯಮಾಪನ ಮಾಡಲು ಸದಸ್ಯ ರಾಷ್ಟ್ರಗಳಲ್ಲಿ ಮನವಿ ಮಾಡಿದರು.