ಲಕ್ನೋ: 2 ವರ್ಷದಿಂದ ಪ್ರಶಸ್ತಿ ಗೆಲ್ಲಲಾಗದೆ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಭಾರತದ ಸ್ಟಾರ್ ಷಟ್ಲರ್ ಪಿ.ವಿ. ಸಿಂಧು ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಸೂಪರ್ 300 ಬ್ಯಾಡ್ಮಿಂಟನ್ ಚಾಂಪಿಯನ್ ಆಗುವ ಮೂಲಕ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದಾರೆ.
ಭಾನುವಾರ ರಾತ್ರಿ ನಡೆದ ಮಹಿಳೆಯ ವಿಭಾಗದ ಸಿಂಗಲ್ಸ್ ಫೈನಲ್ನಲ್ಲಿ ಚೀನಾದ ವು ಲುವೊ ಯು ಅವರನ್ನು 21-14, 21-16 ಅಂತರದಿಂದ ಮಣಿಸಿದ ಪಿ.ವಿ. ಸಿಂಧು ಚಾಂಪಿಯನ್ ಆದರು. ಪಿ.ವಿ. ಸಿಂಧು 2022 ರಲ್ಲಿ ಸಿಂಗಾಪುರ್ ಓಪನ್ ಟೂರ್ನಿಯಲ್ಲಿ ಜಯಗಳಿಸಿದ್ದರು. ಆ ಬಳಿಕ ಅವರಿಗೆ ಪ್ರಶಸ್ತಿ ಬರ ಕಾಡಿತ್ತು. ಇನ್ನು ಈ ಮೊದಲು 2017 ಮತ್ತು 2022 ರಲ್ಲಿ ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಸೂಪರ್ 300 ಟ್ರೋಫಿಯನ್ನು ಸಿಂಧು ಜಯಿಸಿದ್ದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಿರೀಕ್ಷೆಯಂತೆ ಲಕ್ಷ್ಯ ಸೇನ್ ಅವರು ಸಿಂಗಾಪುರದ ಜಿಯ ಹೆಂಗ್ ಜೇಸನ್ ಅವರನ್ನು 21-6, 21-7 ನೇರ ಗೇಮ್ಗಳಿಂದ ಸೋಲಿಸಿ ಪ್ರಶಸ್ತಿ ಗಳಿಸಿದರು. ಪುರುಷರ ಡಬಲ್ಸ್ ಫೈನಲ್ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್-ಸಾಯಿ ಪ್ರತೀಕ್ ಅವರನ್ನು ಚೀನದ ಹುವಾಂಗ್ ಡಿ-ಲಿಯು ಯಾಂಗ್ 21-14, 19-21, 21-17 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದರು.
ಮಿಶ್ರ ಡಬಲ್ಸ್ ಫೈನಲ್ನಲ್ಲಿ ತನಿಷಾ ಕ್ರಾಸ್ಟೊ-ಧ್ರುವ ಕಪಿಲ ಥಾಯ್ಲೆಂಡ್ನ ಡೆಚಾಪೋಲ್ ಪುವಾರಾನುಕ್ರೋಹ್-ಸುಪಿಸ್ಸರ ಪೆವ್ಸಂಪ್ರಾನ್ ವಿರುದ್ಧ ಸೋಲನುಭವಿಸುವ ಮೂಲಕ ರನ್ನರ್ ಅಪ್ ಆದರು. ಮಹಿಳಾ ಡಬಲ್ಸ್ ಫೈನಲ್ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಚೀನದ ಬಾವೊ ಲಿ ಜಿಂಗ್-ಲಿ ಕ್ವಿಯಾನ್ ಅವರನ್ನು 21-18, 21-11 ಅಂತರದಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ಸೂಪರ್ 300 ಪ್ರಶಸ್ತಿ ಗೆದ್ದು ಬೀಗಿದರು.