ಹೈದರಾಬಾದ್: ಒಲಿಂಪಿಕ್ಸ್ ಪದಕ ವಿಜೇತ ಷಟ್ಲರ್ ಪಿ.ವಿ. ಸಿಂಧು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದು, ಇದೇ ತಿಂಗಳು ರಾಜಸ್ಥಾನದಲ್ಲಿ ಅದ್ದೂರಿ ವಿವಾಹ ನಡೆಯಲಿದೆ.
ಡಿಸೆಂಬರ್ 22 ರಂದು ರಾಜಸ್ಥಾನದ ಲೇಟ್ ಸಿಟಿ ಉದಯಪುರದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಡಿಸೆಂಬರ್ 20 ರಂದು ವಿವಾಹ ಕಾರ್ಯಕ್ರಮಗಳು ಆರಂಭವಾಗಲಿವೆ, ಡಿಸೆಂಬರ್ 24 ರಂದು ಹೈದರಾಬಾದ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಸಿಂಧು ಅವರ ತಂದೆ ಪಿವಿ ರಾಮಣ್ಣ ತಿಳಿಸಿದ್ದಾರೆ.
ಸಿಂಧು ಮದುವೆ ಆಗ್ತಿರುವ ಹುಡುಗನ ಹೆಸರು ವೆಂಕಟ ದತ್ತ ಸಾಯಿ. ಇವರು ಮೂಲತಃ ಹೈದರಾಬಾದ್ನವರಾಗಿದ್ದು, ಸದ್ಯ Posidex Technologies ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ವೆಂಕಟ್ ದತ್ತ ಸಾಯಿ ಜೆಎಸ್ಡಬ್ಲೂ ಕಂಪನಿಗೆ ಆಂತರಿಕ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. 2019ರಲ್ಲಿ ಆ್ಯಪಲ್ ಅಸೆಟ್ ಮ್ಯಾನೇಜ್ಮೆಂಟ್ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸಿಂಧು 2016ರ ರಿಯೊ ಮತ್ತು 2020ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಸತತ ಪದಕಗಳನ್ನು ಗೆದ್ದಿದಾರೆ. ಇನ್ನು 2019ರಲ್ಲಿ ಚಿನ್ನ ಸೇರಿದಂತೆ ಐದು ವಿಶ್ವ ಚಾಂಪಿಯನ್ಶಿಪ್ ಪದಕಗಳನ್ನು ಗೆದ್ದ ಭಾರತದ ಶ್ರೇಷ್ಠ ಅಥ್ಲೀಟ್ಗಳಲ್ಲಿ ಒಬ್ಬರು. 2017ರಲ್ಲಿ ತಮ್ಮ ವೃತ್ತಿಜೀವನದ-ಉನ್ನತ ವಿಶ್ವ ನಂಬರ್ 2 ಶ್ರೇಯಾಂಕವನ್ನು ಪಡೆದಿದ್ದರು.