ವೈರಲ್

ಯುವತಿ ಪ್ರಾಣಕ್ಕೇ ಕುತ್ತು ತಂದ ಹಣ ಡಬಲ್‌ ಮಾಡುವ ಆಸೆ..!

ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ಪ್ರಿಯಾಂಕಾ ಎಂಬ ಯುವತಿಯ ಡೆತ್‌ ನೋಟ್‌ ಸಿಕ್ಕಿದೆ.

ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ಪ್ರಿಯಾಂಕಾ ಎಂಬ ಯುವತಿಯ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ. ಯುವತಿ ಬರೆದ ಡೆತ್‌ ನೋಟ್‌ ಸಿಕ್ಕಿದ್ದು ಆತ್ಮಹತ್ಯೆ ಹಿಂದಿನ ಕಾರಣ ತಿಳಿದು ಬಂದಿದೆ. ಆತ್ಮಹತ್ಯೆಗೂ ಮುನ್ನ ಪ್ರಿಯಾಂಕಾ ಬರೆದ ಲೆಟರ್‌ ನಿಂದ, ಆಕೆ ಹಣದ ವಿಚಾರಕ್ಕೆ ನೇಣಿಗೆ ಶರಣಾದಳು ಎಂಬುದು ತಿಳಿದು ಬಂದಿದೆ. 

ಎಂಇಎಸ್‌ ಕಾಲೇಜಿನಲ್ಲಿ ಓದುತ್ತಿದ್ದ 19 ವರ್ಷದ ಪ್ರಿಯಾಂಕಾಗೆ, ಆಕೆ ಜೊತೆಯಲ್ಲೇ ಓದುತ್ತಿದ್ದ ದಿಗಂತ್‌ ಎಂಬ ಯುವಕ ಹಣ ಡಬಲ್‌ ಹಾಗೂ ಬಿಎಂಡಬ್ಲ್ಯೂ ಕಾರಿನ ಆಸೆ ತೋರಿಸಿದ್ದ. ಇದೇ ಆಸೆಗೆ ಬಿದ್ದ ಪ್ರಿಯಾಂಕಾ ಮನೆಯವರಿಗೆ ಗೊತ್ತಾಗದಂತೆ ಮನೆಯಲ್ಲಿದ್ದ ಚಿನ್ನವನ್ನೆಲ್ಲ ತಂದು ದಿಗಂತ್‌ಗೆ ಕೊಟ್ಟಿದ್ದಳು. ಪ್ರಿಯಾಂಕಾಳಿಂದ 15 ಲಕ್ಷ ಮೌಲ್ಯದ ಚಿನ್ನಭರಣ ಪಡೆದಿದ್ದ ದಿಗಂತ್‌ ಅದನ್ನು ಅಡವಿಟ್ಟಿದ್ದ. ಹಲವು ದಿನ ಕಳೆದ್ರೂ ಹಣವನ್ನೂ ಕೊಡದೇ, ಚಿನ್ನವನ್ನೂ ಕೊಡದೇ ಸತಾಯಿಸಿದ್ದ.  ಎಷ್ಟೇ ಬಾರಿ ಚಿನ್ನ ವಾಪಸ್‌ ಕೊಡಿ ಎಂದರೂ ದಿಗಂತ್‌ ಮಾತ್ರ ಕೇರ್‌ ಮಾಡಿರಲಿಲ್ಲ. ಇತ್ತ ಮನೆಯವರಿಂದ ಈ ವಿಚಾರ ಮುಚ್ಚಿಟ್ಟಿದ್ದ ಪ್ರಿಯಾಂಕಾ ಅದೇ ಭಯದಲ್ಲಿದ್ದಳು. ಕೊನೆಗೆ ಆತ್ಮಹತ್ಯೆಗೆ ಶರಣಾಗಿ, ಆತ್ಮಹತ್ಯೆಗೆ ಕಾರಣ ದಿಗಂತ್‌ ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಳು. ಸದ್ಯ ಡೆತ್‌ ನೋಟ್‌ ಆಧಾರದ ಮೇಲೆ ಆರೋಪಿ ದಿಗಂತ್‌ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.