ಇಸ್ಲಾಮಾಬಾದ್: ಪಾಕಿಸ್ತಾನದ ಕೇಂದ್ರೀಯ ಸುಪೀರಿಯರ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ರಾಜೇಂದರ್ ಮೇಘವಾರ್ ಎಂಬ ಹಿಂದೂ ಯುವಕ ಪಾಕಿಸ್ತಾನ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಪಾಕಿಸ್ತಾನ ಪೊಲೀಸ್ ಸೇವೆಗೆ ಆಯ್ಕೆಯಾದ ಮೊದಲ 'ಹಿಂದು' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಜೇಂದರ್ ಮೇಘವಾರ್ ಪಾಕಿಸ್ತಾನ ಪೊಲೀಸ್ ಸೇವೆಗೆ ಆಯ್ಕೆಯಾದ ನಂತರ ಫೈಸಲಾಬಾದ್ನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್ಪಿ) ನೇಮಕಗೊಂಡಿದ್ದಾರೆ. ರಾಜೇಂದರ್ ಮೇಘವಾರ್, ಸಿಂದ್ ಪ್ರಾಂತ್ಯದ ಬಾದಿನ್ ಪ್ರದೇಶದವರು. ಪಾಕಿಸ್ತಾನದಲ್ಲಿ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ದರ್ಜೆಯ ಹುದ್ದೆಗಳಲ್ಲಿ ಹಿಂದೂ ಸಮುದಾಯದವರು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ 'ಪಾಕಿಸ್ತಾನ ಪೊಲೀಸ್ ಸೇವೆ'ಗೆ ಹಿಂದೂ ವ್ಯಕ್ತಿಯೊಬ್ಬರು ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಕೇಂದ್ರೀಯ ಸುಪೀರಿಯರ್ ಸರ್ವೀಸಸ್ ಪರೀಕ್ಷೆಯಲ್ಲಿ ಹಿಂದೂ ವಿದ್ಯಾರ್ಥಿಗಳಾದ ರೂಪ್ ಮತಿ ಮೇಘವಾರ್, ಪೂಜಾ ಓಡ್, ಸುನೀಲ್ ಮೇಘವಾರ್, ಜೀವನ್ ರಿಬಾರಿ ಮತ್ತು ಭೀಶಮ್ ಮೇಘವಾರ್ ಸಹ ಉತ್ತೀರ್ಣರಾಗಿದ್ದಾರೆ. ಇವರು ಪಾಕಿಸ್ತಾನದಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.