ಕಾಬೂಲ್: ಮಹಿಳೆಯರ ಮೇಲೆ ಹಲವು ನಿರ್ಬಂಧ ಹೇರಿರುವ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ತಾಲಿಬಾನ್ ಸರ್ಕಾರದ ಆಫ್ಘನ್ ಕ್ರಿಕೆಟಿಗರಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಟೀಕಿಸಿದ್ದಾರೆ.
2021ರ ಆಗಸ್ಟ್ ನಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿದ್ದ ಸರ್ಕಾರವನ್ನು ಉರುಳಿಸಿ ತಮ್ಮ ಅಧಿಕಾರವನ್ನು ಸ್ಥಾಪಿಸಿದ್ದರು. ಆ ಬಳಿಕ ಕಳೆದ 3 ವರ್ಷಗಳಲ್ಲಿ ತಾಲಿಬಾನಿ ಆಡಳಿತ ಮಹಿಳೆಯರ ಹಕ್ಕುಗಳ ಮೇಲೆ ನಿರ್ಬಂಧ ಹೇರುತ್ತಾ ಬಂದಿದೆ. ಜತೆಗೆ ಮಹಿಳೆಯರ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಿದಾರೆ. ಮಹಿಳೆಯರು ಮನೆಯಿಂದ ಹೊರ ಬರುವಾಗ ಮುಖ ಮುಚ್ಚುವಂತೆ ಬುರ್ಖಾ ಧರಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಿತ್ತು.
ಈಗ ಅಫ್ಘಾನಿಸ್ತಾನದಲ್ಲಿ ಮಹಿಳೆಯ ವಿರುದ್ಧ ಮತ್ತಷ್ಟು ನಿರ್ಬಂಧಗಳು ಹೇರಿಕೆಯಾಗುತ್ತಿದ್ದು, ಇನ್ನು ಮುಂದೆ ದೇಶದಲ್ಲಿ ಮಹಿಳೆಯರು ಶುಶ್ರೂಷಕಿ ಹಾಗೂ ನರ್ಸಿಂಗ್ ಶಿಕ್ಷಣವನ್ನು ಪಡೆಯುವಂತಿಲ್ಲ ಎಂದು ತಿಳಿಸಿದೆ. ಡಿಸೆಂಬರ್ 2 ರಂದು ತಾಲಿಬಾನ್ ಸಚಿವ ಹಿಬತುಲ್ಲಾ ಅಖುಂದ್ಜಾದಾ ಈ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ತಾಲಿಬಾನಿ ಸರ್ಕಾರದ ವಿರುದ್ಧ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಧ್ವನಿ ಎತ್ತಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ರಶೀದ್ ಖಾನ್ ಇಸ್ಲಾಂನಲ್ಲಿ ಶಿಕ್ಷಣ ಎಂಬುದು ಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ. ಅದು ಪ್ರತಿಯೊಬ್ಬರು ಹಕ್ಕು ಕೂಡ ಆಗಿದೆ.ಆದರೆ ನಮ್ಮ ಸಹೋದರಿಯರಿಗೆ ವೈದ್ಯಕೀಯ ಶಿಕ್ಷಣದ ಬಾಗಿಲು ಮುಚ್ಚಿರುವುದು ನನ್ನನು ದುಃಖಿತನನ್ನಾಗಿ ಮಾಡಿದೆ. ಎಲ್ಲರಿಗೂ ಶಿಕ್ಷಣವನ್ನು ಒದಗಿಸುವುದು ಸಾಮಾಜಿಕ ಜವಾಬ್ದಾರಿ ಮಾತ್ರವಲ್ಲ, ನಮ್ಮ ನೈತಿಕ ಹೊಣೆಗಾರಿಕೆಯಾಗಿದೆ. ಸರ್ಕಾರದ ಈ ನಡೆ ನಿರಾಶೆಗೊಳಿಸಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಮೊಹಮ್ಮದ್ ನಬಿ ಸಹ ರಶೀದ್ ಖಾನ್ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿ ಪೋಸ್ಟ್ ಶೇರ್ ಮಾಡಿದ್ದಾರೆ.