ಮಂಡ್ಯ: ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಯಲ್ಲಿ ಸುಟ್ಟು ಹೋಗಿದ್ದ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಪರಿಹಾರ ವಿತರಣೆಯನ್ನ ನೀಡಲಾಗಿದೆ. ನಾಗಮಂಗಲ ತಾಲೂಕು ಕಚೇರಿಯಲ್ಲಿ ಪರಿಹಾರ ವಿತರಣೆ ಕಾರ್ಯಕ್ರಮವನ್ನ ಆಯೋಜಿಸಿ, ಘಟನೆಯಲ್ಲಿ ಹಾನಿಯಾಗಿದ್ದ ಕಟ್ಟಡ/ಅಂಗಡಿ ಮಾಲೀಕರಿಗೆ ಸಚಿವ ಎನ್.ಚಲುವರಾಯಸ್ವಾಮಿ ಪರಿಹಾರ ವಿತರಣೆ ಮಾಡಿದ್ದಾರೆ. ನಷ್ಟಕೀಡಾಗಿದ್ದವರಿಗೆ ಒಟ್ಟು 76,45,000/- ಲಕ್ಷ ರೂ ಪರಿಹಾರ ವಿತರಣೆ ಮಾಡಲಾಗಿದ್ದು, ಇದರ ಜೊತೆಗೆ ಸಚಿವ ಚಲುವರಾಯಸ್ವಾಮಿ ವೈಯಕ್ತಿಕವಾಗಿ ಪ್ರತಿಯೊಬ್ಬರಿಗೂ 10ಸಾವಿರ ರೂಪಾಯಿ ವಿತರಣೆ ಮಾಡಿದ್ದಾರೆ.
ಒಟ್ಟಾರೆ 22 ಅಂಗಡಿ ಮಾಲೀಕರಿಗೆ ರೂ 26,45,000 ಹಾಗೂ 22 ವ್ಯಾಪರಸ್ಥರಿಗೆ ರೂ. 47,85,000 ಪರಿಹಾರ ಮಂಜೂರಾತಿ ಪತ್ರ ವಿತರಣೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಈ ಹಿಂದೆ ಸರ್ಕಾರದಿಂದ ಇಂತಹ ಅವಘಡ ಪ್ರಕರಣಗಳಲ್ಲಿ ಸುಮಾರು ರೂ 10,000/- ಮಾತ್ರ ಪರಿಹಾರ ನೀಡಲಾಗುತ್ತಿತ್ತು. ಆದ್ರೆ, ಇದರಿಂದ ವೃತ್ತಿ ಜೀವನ ಪುನ ಕಟ್ಟಿಕೊಳ್ಳಲು ಸಾಕಾಗುವುದಿಲ್ಲ. ಹಾಗಾಗಿ ಸರ್ಕಾರ ಈ ಬಾರಿ ದೊಡ್ಡ ಮೊತ್ತದ ಪರಿಹಾರ ನೀಡಿದೆ. ಹಾಗೇ ವೈಯಕ್ತಿಕವಾಗಿ 10 ಸಾವಿರ ಪರಿಹಾರವನ್ನು ಸಹ ನೀಡಲಾಗಿದೆ ಎಂದರು. ಇನ್ನು ಈ ಕಾರ್ಯಕ್ರಮದಲ್ಲಿ ಡಿಸಿ ಡಾ. ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಿಇಓ ಶೇಖ್ ತನ್ವೀರ್ ಆಸಿಫ್, ಸೇರಿ ಮತ್ತಿತರರು ಭಾಗಿಯಾಗಿದ್ರು.
ಇನ್ನು ನಾಗಮಂಗಲದಲ್ಲಿ ಸೆ.11 ರಂದು ನಡೆದ ಗಣಪತಿ ವಿಸರ್ಜನೆ ವೇಳೆ ಕೋಮು ಗಲಭೆ ಉಂಟಾಗಿ ಸಾಕಷ್ಟು ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದವು. ಇದರಿಂದ ಮಾಲೀಕರಿಗೆ ಭಾರಿ ಮೊತ್ತದ ನಷ್ಟವಾಗಿತ್ತು. ಹಾನಿಯಾಗಿದ್ದ ಕಟ್ಟಡ/ಅಂಗಡಿ ಮಾಲೀಕರಿಗೆ ರಾಜ್ಯ ಸರ್ಕಾರವು ಪರಿಹಾರವನ್ನು ಘೋಷಿಸಿತ್ತು.