ಕರ್ನಾಟಕ

ಹೆಂಡತಿಗೆ ಮಂಗಳ ಸೂತ್ರ ಕೊಡಿಸಲು ಎಟಿಎಂಗೆ ಕನ್ನ ಹಾಕಿದ ಖದೀಮ..!

ಹೆಂಡತಿಗೆ ಮಂಗಳ ಸೂತ್ರ ಕೊಡಿಸಲು ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂ ನಲ್ಲಿ ಹಣ ಎಗರಿಸಿದ ಭೂಪ ಅಂದರ್ ಆಗಿದ್ದಾನೆ.

ಬೆಳಗಾವಿ : ಮಡದಿಯ ಆಸೆ ತೀರಿಸಲು ಇಲ್ಲೊಬ್ಬ ಎಟಿಎಂಗೆ ಕೈ ಹಾಕಿದ್ದಾನೆ. ಹೆಂಡತಿಗೆ ಮಂಗಳ ಸೂತ್ರ ಕೊಡಿಸಲು ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂ ನಲ್ಲಿ ಹಣ ಎಗರಿಸಿದ ಭೂಪ ಅಂದರ್ ಆಗಿದ್ದಾನೆ. ಬೆಳಗಾವಿ ನಗರದ ಎಚ್‌ಡಿಎಫ್‌ಸಿ ಬ್ಯಾಂಕ್ ಸಿಬ್ಬಂದಿ ಕೃಷ್ಣಾ ಸುರೇಶ್ ದೇಸಾಯಿಂದಲೇ ಈ ಕೃತ್ಯ ನಡೆದಿದ್ದು, ಎಟಿಎಂನಿಂದ 8 ಲಕ್ಷ ಹಣವನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ.

ಆರೋಪಿ ಕೃಷ್ಣಾ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ‌. ಹಣ ಹಾಕಲು ಇರ್ತಿದ್ದ ಎಟಿಎಂ ಮಷೀನ್ ಕೀ ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದ. ಕಳ್ಳತನ ಮಾಡಿದ ದಿವಸ ಟೀಮ್ ಜೊತೆಗೆ ಬಂದು ಹಣ ಹಾಕಿ ಬಳಿಕ ಸಂಜೆ ಒಬ್ಬನೇ ಬಂದು ಬಿಂದಾಸ್‌ ಆಗಿ ಕಳ್ಳತನ ಮಾಡಿದ್ದಾನೆ. ಎರಡು ದಿನದ ಬಳಿಕ ಈತನ ಕೃತ್ಯ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ಎಟಿಎಂ ನಿಂದ ತಮ್ಮ‌ ಸಿಬ್ಬಂದಿ ಹಣ ಕದ್ದಿದ್ದು ಕಂಡು ಶಾಕ್ ಬ್ಯಾಂಕ್‌ ಸಿಬ್ಬಂದಿ ಆಗಿದ್ರು. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸದ್ಯ ತಲೆ ಮರೆಸಿಕೊಂಡಿದ್ದ ಆರೋಪಿ ಕೃಷ್ಣಾ ದೇಸಾಯಿ ಪತ್ತೆ ಹಚ್ಚಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇನ್ನು ಬಂಧಿತನಿಂದ ಒಂದು ಮಂಗಲ ಸೂತ್ರ, ಚಿನ್ನದ ಸರ, ಏಳು ಲಕ್ಷ ರೂ. ‌ನಗದು ಜಪ್ತಿ ಮಾಡಿಕೊಂಡಿದ್ದಾರೆ.