ಅಡಿಲೇಡ್: ಬಾರ್ಡರ್ ಗವಾಸ್ಕರ್ ಟ್ರೋಫಿಯ 2 ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಆರ್ಡರ್ ಹೇಗಿರಬಹುದು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ನಾಯಕ ರೋಹಿತ್ ಶರ್ಮಾ ಪರ್ತ್ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಕೆ.ಎಲ್. ರಾಹುಲ್‌ಗೆ ಓಪನರ್ ಸ್ಥಾನ ಬಿಟ್ಟುಕೊಟ್ಟಿದಾರೆ.
ರೋಹಿತ್ ಶರ್ಮಾ ಪರ್ತ್ ಟೆಸ್ಟ್ ನಲ್ಲಿ ಆಡಿರಲಿಲ್ಲ. ಜತೆಗೆ ಶುಭಮಾನ್ ಗಿಲ್ ಸಹ ಪರ್ತ್ ನಲ್ಲಿ ಆಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಿದ್ದರು. ಪರ್ತ್ ನಲ್ಲಿ ರಾಹುಲ್ ಸ್ಥಿರ ಪ್ರದರ್ಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್ ನಲ್ಲೂ ರಾಹುಲ್‌ರನ್ನು ಓಪನರ್ ಆಗಿ ಕಣಕ್ಕೀಳಿಸಬೇಕು ಎಂದು ಚರ್ಚೆ ನಡೆಯುತ್ತಿತ್ತು. ಈಗ ಪಂದ್ಯಕ್ಕೂ ಮುನ್ನದಿನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ದ್ವಿತೀಯ ಪಂದ್ಯದಲ್ಲಿಯೂ ಕೆ.ಎಲ್ ರಾಹುಲ್ ಆರಂಭಿಕನಾಗಿ ಆಡಲಿದ್ದು, ನಾನು(ರೋಹಿತ್) ಮಧ್ಯಮ ಕ್ರಮಾಂಕದಲ್ಲಿ ಆಡುವುದಾಗಿ ಖಚಿತಪಡಿಸಿದ್ದಾರೆ.
ಪರ್ತ್ ಟೆಸ್ಟ್ನಲ್ಲಿ ಕೆ.ಎಲ್ ರಾಹುಲ್ ಬ್ಯಾಟ್ ಮಾಡಿದ ರೀತಿಯನ್ನು ನಾನು ನವಜಾತ ಶಿಶುವನ್ನು ನನ್ನ ಕೈಯಲ್ಲಿ ಹಿಡಿದುಕೊಂಡು ಮನೆಯಿಂದಲೇ ನೋಡುತ್ತಿದ್ದೆ. ಅವರು ಅದ್ಭುತವಾಗಿ ಆಡಿದರು. ಆದ್ದರಿಂದ ಈಗ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ. ಭವಿಷ್ಯದಲ್ಲಿ ವಿಷಯಗಳು ವಿಭಿನ್ನವಾಗಿರಬಹುದು. ರಾಹುಲ್ ವಿದೇಶಿ ನೆಲದಲ್ಲಿ ಉತ್ತಮವಾಗಿ ಆಡಿದ್ದಾರೆ. ಆದ್ದರಿಂದ ಅವರು ಈ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ರೋಹಿತ್ ಹೇಳಿದರು.
ಆಸ್ಟ್ರೇಲಿಯಾ ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ತಂಡದಲ್ಲಿ ಏಕಮಾತ್ರ ಬದಲಾವಣೆ ಮಾಡಿದೆ. ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ಶುಭಮಾನ್ ಗಿಲ್ ದ್ವಿತೀಯ ಪಂದ್ಯದಲ್ಲಿ ಆಡುವ ಕಾರಣ ಭಾರತ ತಂಡದಲ್ಲಿ 2 ಬದಲಾವಣೆ ಆಗಲಿದೆ.