ಮೆಲ್ಬರ್ನ್: ಮೆಲ್ಬರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲೂ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದೆ. ಜತೆಗೆ ನಾಯಕತ್ವದಲ್ಲೂ ರೋಹಿತ್ ಕಮಾಲ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಸರಣಿಯೇ ರೋಹಿತ್ ಪಾಲಿಗೆ ಕೊನೆಯ ಟೆಸ್ಟ್ ಸರಣಿಯಾಗುವ ನಿರೀಕ್ಷೆ ಇದೆ.
ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮೆಲ್ಬರ್ನ್ ತಲುಪಿದ್ದು ರೋಹಿತ್ ಶರ್ಮಾ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಆಡದಿದ್ದ ರೋಹಿತ್ ಎರಡನೇ ಪಂದ್ಯಕ್ಕೆ ತಂಡವನ್ನು ಕೂಡಿಕೊಂಡಿದ್ದರು. ಅವರು ತಂಡಕ್ಕೆ ಮರಳಿದ್ದರೂ ಸಹ ರನ್ ಗಳಿಸಲು ಪರದಾಡುತ್ತಿದ್ದಾರೆ. ಜತೆಗೆ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಒಂದು ಪಂದ್ಯ ಸೋತು ಒಂದು ಪಂದ್ಯ ಡ್ರಾ ಮಾಡಿಕೊಂಡಿದೆ. ಈಗ ನಾಲ್ಕನೆ ಟೆಸ್ಟ್ ನಲ್ಲೂ ಸಹ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.
ಇತ್ತ ಮೆಲ್ಬರ್ನ್ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ 5 ಎಸೆತಗಳಲ್ಲಿ 3 ರನ್ ಗಳಿಸಿ ಔಟಾಗಿದ್ದರು. ಜತೆಗೆ ಕಳೆದ 8 ಟೆಸ್ಟ್ ಪಂದ್ಯಗಳಲ್ಲಿ 11.07 ರ ಸರಾಸರಿಯಲ್ಲಿ 155 ರನ್ ಮಾತ್ರ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೋಹಿತ್ ಮೇಲೆ ನಿವೃತ್ತಿಯ ಒತ್ತಡ ಹೆಚ್ಚುತ್ತಿದೆ. ಜತೆಗೆ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ತಲುಪಲು ಭಾರತ ವಿಫಲವಾದರೆ ರೋಹಿತ್ ಶೃಮಾ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.