ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ.. ಈ ಹಬ್ಬದಲ್ಲಿ ಎಳ್ಳು-ಬೆಲ್ಲ ಹಂಚೋದು, ಒಳ್ಳೆಯ ಮಾತುಗಳನ್ನಾಡಿ ಎಂದು ಆಶಿಸೋದು ಪರಂಪರೆ. ಇದರ ಜೊತೆಗೆ ಪರಂಪರಾಗತವಾಗಿ ನಡೆದು ಬಂದ ಮತ್ತೊಂದು ಪ್ರಮುಖ ಆಚರಣೆ ಎಂದರೆ, ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶಿಸೋದು. ಅಂದರಂತೆ ಐತಿಹಾಸಿಕ ಶಿವನ ದೇಗುಲಗಳಲ್ಲಿ ಸೂರ್ಯರಶ್ಮಿ ಸ್ಪರ್ಶಿಸಿದ ಬಳಿಕವೇ ಈ ವರ್ಷದ ಸಂಕ್ರಾಂತಿ ಸಂಪನ್ನಗೊಂಡಿದೆ ಎಂಬ ಅರ್ಥ. ಆದ್ರೆ ಬೆಂಗಳೂರಿನ ಐತಿಹಾಸಿಕ ದೇವಾಲಯವಾದ, ಗವಿ ಗಂಗಾಧರೇಶ್ವರನ ಸನ್ನಿಧಿಯಲ್ಲಿ ಈ ಬಾರಿಯೂ ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶಿಸಿಲ್ಲ.
ಹೌದು, ಮೋಡ ಕವಿದ ವಾತಾವರಣ ಇರುವುದರಿಂದ ಈ ಬಾರಿಯೂ ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶಿಸಿಲ್ಲ. ಇದರಿಂದ ಭಕ್ತರಿಗೆ ನಿರಾಸೆಯಾಗುವುದರ ಜೊತೆಗೆ, ಆತಂಕವೂ ಉಂಟಾಗಿದೆ. ಮಂಡ್ಯ ಜಿಲ್ಲೆಯಲ್ಲಿರುವ ಕಾಶಿ ಚಂದ್ರಮೌಳೇಶ್ವರ ದೇಗುಲದ ಶಿವಲಿಂಗಕ್ಕೂ, ಸೂರ್ಯರಶ್ಮಿ ಸ್ಪರ್ಶಿಸದ ಹಿನ್ನೆಲೆ ಆತಂಕಗೊಂಡ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಗಂಡಾಂತರದ ಸೂಚನೆ ಎಂದಿದ್ದಾರೆ. ಪ್ರಾಕೃತಿಕ ವಿಕೋಪ, ಅತಿವೃಷ್ಠಿ ಸಂಭವಿಸಿ ಅನಾಹುತಗಳಾಗುವ ಸಾಧ್ಯತೆ ಇದೆ ಎಂದು ಭೀತಿ ವ್ಯಕ್ತಪಡಿಸಿದ್ದಾರೆ.