ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೊಜಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯದ ವಾರ್ಡನ್ ನೊಬ್ಬ ಮಹಿಳಾ ಸ್ವಚ್ಛತಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ನಡೆದಿದೆ.
ಹೌದು, ವಾರ್ಡನ್ ಶಂಕರ್ ಪೊಳ ಎಂಬಾತನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಮಹಿಳೆ, ವಾರ್ಡನ್ ನೀಡುತ್ತಿದ್ದ ಕಿರುಕುಳ, ಬೆದರಿಕೆ ಹಾಕಿದ್ದರ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ನೊಂದ ಮಹಿಳೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ 7 ವರ್ಷಗಳಿಂದ ಮಹಿಳೆ ಕೊಜಳ್ಳಿ ವಸತಿ ನಿಲಯದಲ್ಲಿ ಸ್ವಚ್ಚತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಒಂದು ವರ್ಷದಿಂದ ವಾರ್ಡನ್ ಮಹಿಳೆಯ ಮೈ-ಕೈ ಮುಟ್ಟಿ ಕಿರುಕುಳ ನೀಡುತ್ತಿರುವುದೂ ಅಲ್ಲದೇ ಅಸಭ್ಯವಾಗಿ ವರ್ತಿಸುತ್ತಿದ್ದಾನೆ. ಅಲ್ಲದೇ ಮಹಿಳೆಗೆ ತನ್ನ ಜೊತೆ ಸಹಕರಿಸದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಸಾಂತ್ವನ ಕೇಂದ್ರಕ್ಕೂ ಮಹಿಳೆ ದೂರು ನೀಡಿದ್ದಾರೆ.