ಮುಂಬೈ: ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಟೀಂ ಇಂಡಿಯಾದ ಆರಂಭಿಕ ಆಟಗಾರ ಪೃಥ್ವಿ ಶಾ ಗೆ ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್ ಶೇನ್ ವಾಟ್ಸನ್ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಬೆಂಬಲ ಸೂಚಿಸಿದಾರೆ.
ಪೃಥ್ವಿ ಶಾ ಕುರಿತು ಟ್ವೀಟ್ ಮಾಡಿರುವ ಕೆವಿನ್ ಪೀಟರ್ಸನ್ ಪೃಥ್ವಿ ಶಾ ಅವರು ಸ್ವಾಭಾವಿಕ ಸಾಮರ್ಥ್ಯವನ್ನು ಹೊಂದಿದ್ದು, ಅವರು ತಮ್ಮ ಫಾರ್ಮ್ ಮರಳಲು ಕಠಿಣ ಪರಿಶ್ರಮವನ್ನು ಪಡಬೇಕಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶೇನ್ ವಾಟ್ಸನ್, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಬಲಿಷ್ಠವಾಗಿ ಕಮ್ಬ್ಯಾಕ್ ಮಾಡುವ ಅದ್ಭುತ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪೃಥ್ವಿ ಶಾ ಹೊಂದಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ವಾರಗಳಿಂದ ಪೃಥ್ವಿ ಶಾ ತಮ್ಮ ವೃತ್ತಿ ಜೀವನದಲ್ಲಿ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಅವರು ಫಿಟ್ನೆಸ್ ಹಾಗೂ ಸ್ಥಿರ ಪ್ರದರ್ಶನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಮಾಜಿ ಕ್ರಿಕೆಟಿಗರು, ಪೃಥ್ವಿ ಶಾ ಅವರ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಡೆಸುತ್ತಿದ್ದಾರೆ.