ಡಿಸೆಂಬರ್ 9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಇದರ ನಡುವೆಯೇ ಶಿವಸೇನೆ ಪುಂಡರು ಬಾಲ ಬಿಚ್ಚಿದ್ದಾರೆ. ಇತ್ತ ಅಧಿವೇಶನದ ಮೊದಲ ದಿನವೇ ನಾಡದ್ರೋಹಿ ಎಂಇಎಸ್ ಮಹಾಮೇಳಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸರ್ಕಾರದ ವಿರುದ್ಧ ಧಮ್ಕಿ ಹಾಕಿರುವ ಶಿವೇಸೇನೆ, ಕರ್ನಾಟಕ-ಮಹಾರಾಷ್ಟ್ರ ಗಡಿಯಾದ ಕೊಲ್ಲಾಪುರ ಗಡಿಯಲ್ಲಿ ಹೈವೇ ಬಂದ್ ಮಾಡಲು ಮುಂದಾಗಿದೆ. ಈ ಬಗ್ಗೆ ನಿನ್ನೆಯಷ್ಟೇ ಕೊಲ್ಲಾಪುರ ಡಿಸಿಗೆ ಮನವಿ ಕೂಡ ಕೊಡಲಾಗಿದೆ.
ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರ ಅಧಿವೇಶನ ನಡೆಸುತ್ತಿದೆ. ಆದರೆ ಎಂಇಎಸ್ ಮಹಾಮೇಳಾವ್‌ಗೆ ಮಾತ್ರ ಕಳೆದ 3 ವರ್ಷಗಳಿಂದ ಅನುಮತಿ ನೀಡಿಲ್ಲ ಎಂದು ಕಿಡಿ ಕಾರಿದ್ದಾರೆ. ಅಲ್ಲದೇ ಮಹಾರಾಷ್ಟ್ರ ನಾಯಕರು ಬೆಳಗಾವಿ ಪ್ರವೇಶಿಸದಂತೆ, ಬೆಳಗಾವಿ ಡಿಸಿ ನಿರ್ಬಂಧ ವಿಧಿಸುತ್ತಿದ್ದಾರೆ. ಈ ಬಾರಿಯಾದ್ರೂ ಎಂಇಎಸ್ ಮಹಾಮೇಳಾವ್‌ಗೆ ಮತ್ತು ಮಹಾರಾಷ್ಟ್ರ ನಾಯಕರು ಬೆಳಗಾವಿ ಪ್ರವೇಶಕ್ಕೆ ಅನುಮತಿ ನೀಡಬೇಕು. ಇಲ್ಲದಿದ್ರೆ ಕರ್ನಾಟಕದ ಶಾಸಕರು, ಸಚಿವರು ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನಕ್ಕೆ ಬಂದಾಗ ಅಡ್ಡಿ ಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.