ಕರ್ನಾಟಕ

ಮನಮೋಹನ್‌ ಸಿಂಗ್‌ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞರು; ಸಿಎಂ ಸಿದ್ದರಾಮಯ್ಯ

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ನಿಧನ ಹೊಂದಿದ್ದು, ಅವರ ಸಾಧನೆಗಳನ್ನು ನೆನೆದು ಸಿಎಂ ಸಿದ್ದರಾಮಯ್ಯ ಭಾವುಕರಾಗಿದ್ದಾರೆ.

ಮನಮೋಹನಸಿಂಗ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞಾರು ಹಾಗೂ ದೇಶದಲ್ಲಿರುವ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದ ಮಹಾನ್‌ ವ್ಯಕ್ತಿ ಎಂದು, ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸೋನಿಯಾಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಆ ಹುದ್ದೆಗೆ ಮನಮೋಹನ್ ಸಿಂಗ್ ಅವರನ್ನು ಆರಿಸಿದರು. ಹತ್ತು ವರ್ಷಗಳ ಕಾಲ ದೇಶವನ್ನು ಅತ್ಯಂತ ಸದೃಡವಾಗಿ ಮುನ್ನಡೆಸಿದರು. ಅವರ ಬದುಕಿನ ಮಾರ್ಪಾಡು ನೋಡಿದಾಗ ಆಶ್ಚರ್ಯ ಆಗತ್ತೆ. ಅತ್ಯಂತ ಕಡುಬಡತನದ ಕುಟುಂಬದಲ್ಲಿ ಜನಿಸಿ, ದೇಶ ಕಂಡ ವಿಶ್ವಶ್ರೇಷ್ಢ ಆರ್ಥಿಕ ತಜ್ಞರಾಗಿ ಎರಡು ಬಾರಿ ದೇಶದ ಪ್ರಧಾನಿಯಾದರು. ಇವರಿಗಿಂತ ದೊಡ್ಡ ಆರ್ಥಿಕ ತಜ್ಞರು ಇರಬಹುದು. ಆದರೆ, ಬಹಳ ಮೃದು ಸ್ವಭಾವದ, ಮಿತ ಭಾಷಿಯಾಗಿ ಮಧ್ಯಮ ಮತ್ತು ಬಡ ಜನರ ದೃಷ್ಟಿಯಿಂದ ಈ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದವರು. ನಾನು ಹಲವು ಬಾರಿ ಇವರನ್ನು ಭೇಟಿಯಾಗಿದ್ದೆ. ಸಂಯಮದಿಂದ ನಮ್ಮ ಮಾತನ್ನು ಕೇಳಿಸಿಕೊಂಡು ಬಳಿಕ ಪ್ರಾಮಾಣಿಕ ಅಭಿಪ್ರಾಯ ನೀಡುತ್ತಿದ್ದರು. ತಾವು ಅಲಂಕರಿಸಿದ ಎಲ್ಲಾ ಹುದ್ದೆಗಳಿಗೂ ನ್ಯಾಯ ಒದಗಿಸಿದರು. RBI ಗವರ್ನರ್ ಆಗಿ, ಆರ್ಥಿಕ ಸಚಿವರಾಗಿ, ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಎಲ್ಲಾ ಹುದ್ದೆಗಳಿಗೂ ಪ್ರಾಮಾಣಿಕ ನ್ಯಾಯ ಒದಗಿಸಿದರು ಎಂದು ಮನಮೋಹನ್‌ ಸಿಂಗ್‌ ಅವರ ದಿನಗಳನ್ನು ನೆನೆದು, ಅವರ ಸಾಧನೆಗಳ ಬಗ್ಗೆ ಮಾತನಾಡಿದ್ದಾರೆ.