ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಭಾರತ ಮೆಚ್ಚಿದ ರಾಜಕಾರಣಿಯಷ್ಟೇ ಅಲ್ಲ. 1960ರಲ್ಲಿ ವಿಶ್ವದ ದೊಡ್ಡಣ್ಣನೇ ಮೆಚ್ಚಿದ ಪ್ರಭಾವಿ ನಾಯಕ. ಅಮೆರಿಕಾದಲ್ಲೂ ತಮ್ಮ ಚಾಪು ಮೂಡಿಸಿದ ಘಟಾನುಘಟಿ ರಾಜಕಾರಣಿ. ಅಂದ್ರೆ 1960ರಲ್ಲಿ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ, ಜಾನ್ ಎಫ್.ಕೆನಡಿ ಅವರ ಪರ ಪ್ರಚಾರ ಮಾಡಿ ಗೆಲ್ಲಿಸಿದ್ರು. ಶಬ್ಬಾಸ್ ಎನಿಸಿಕೊಂಡಿದ್ರು. ಅವರ ಬದುಕಿನಲ್ಲಿಇದೊಂದು ಮರೆಯಲಾಗದ ಘಟನೆ ಎಂದೂ ಹೇಳಬಹುದು. ಅಂದ್ಹಾಗೆ ಅಮೆರಿಕಾಗೂ, ಈ ಮಂಡ್ಯದ ಗಂಡಿಗೂ ನಂಟು ಬೆಳೆದುಕೊಂಡಿದ್ಹೇಗೆ ಗೊತ್ತಾ.? ಮೈಸೂರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದ ಎಸ್‌ಎಂ ಕೃಷ್ಣ ಅವರು ಬೆಂಗಳೂರಿನ ಸರಕಾರಿ ಲಾ ಕಾಲೇಜಿನಿಂದ ಕಾನೂನು ಪದವಿ ಪಡೆದರು. ಮುಂದೆ ಉನ್ನತ ವ್ಯಾಸಾಂಗಕ್ಕಾಗಿ ಅಮೆರಿಕಕ್ಕೆ ತೆರಳಿದರು. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸೌತರ್ನ್ ಮೆಥೋಡಿಸ್ಟ್ ಯುನಿವರ್ಸಿಟಿ ಹಾಗೂ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಜಾರ್ಜ್ ವಾಷಿಂಗ್ಟನ್ ಯುನಿವರ್ಸಿಯಲ್ಲಿ ಉನ್ನತ ವ್ಯಾಸಾಂಗ ಕೈಗೊಂಡರು. ಆ ಸಂದರ್ಭದಲ್ಲೇ ಎಸ್‌ಎಂ ಕೃಷ್ಣ ಅವರಿಗೆ ರಾಜಕೀಯದತ್ತ ಒಲವು ಆರಂಭವಾಗಿತ್ತು.