ಕರ್ನಾಟಕ

ಸದ್ದಿಲ್ಲದೆ ಮುಕ್ತಾಯವಾಯಿತು ಎಸ್.ನಾರಾಯಣ್ ನಿರ್ದೇಶನದ"ಮಾರುತ"

ಖ್ಯಾತ ನಿರ್ಮಾಪಕರಾದ ಕೆ.ಮಂಜು ಹಾಗೂ ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಮೂಲಕ ಜಂಟಿಯಾಗಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಹೆಸರಾಂತ ನಿರ್ದೇಶಕ ಡಾ||ಎಸ್ ನಾರಾಯಣ್ ನಿರ್ದೇಶನದ ಹಾಗೂ ದುನಿಯಾ ವಿಜಯ್ ಮತ್ತು  ಶ್ರೇಯಸ್ ಕೆ ಮಂಜು ಅಭಿನಯಿಸಿರುವ ಚಿತ್ರ "ಮಾರುತ". ಖ್ಯಾತ ನಿರ್ಮಾಪಕರಾದ ಕೆ.ಮಂಜು ಹಾಗೂ ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಮೂಲಕ ಜಂಟಿಯಾಗಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ  ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಬೆಂಗಳೂರು ಸಮೀಪ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯಲಾಯಿತು.           

ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಚಿತ್ರ "ಮಾರುತ". ಈ ಹಿಂದೆ "ಚಂಡ" ಹಾಗೂ "ದಕ್ಷ" ಚಿತ್ರಗಳು ಇವರಿಬ್ಬರ ಕಾಂಬಿನೇಶನ್ ನಲ್ಲಿ ಬಂದು ಜನಪ್ರಿಯವಾಗಿತ್ತು.       

ಮಾರುತ ಒಂದು ಕಂಟೆಂಟ್ ಓರಿಯಂಟೆಡ್ ಚಿತ್ರ. ಇದು ನಿಮ್ಮ ಕಥೆ. ನಮ್ಮ, ನಿಮ್ಮೆಲ್ಲರ ಮನೆಯ ಕಥೆಯೂ ಹೌದು.‌ ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನೆಲ್ಲಾ ಅವರಿಸಿಕೊಂಡಿರುವ ಭೂತ. ಅದರಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳೇನು? ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ

ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರದ ನಾಯಕಿ  ಬೃಂದಾ. ಈವರೆಗೂ ಮಾಡಿರದ ವಿಭಿನ್ನಪಾತ್ರದಲ್ಲಿ ಸಾಧುಕೋಕಿಲ ಅವರು ಕಾಣಿಸಿಕೊಂಡಿದ್ದಾರೆ. ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ ಸೇರಿದಂತೆ ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇರುವ "ಮಾರುತ" ಚಿತ್ರದ ವಿಶೇಷಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿದ್ದಾರೆ.

ಎಸ್ ನಾರಾಯಣ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನವಿದೆ.