ವಿದೇಶ

ದಕ್ಷಿಣ ಕೊರಿಯಾದಲ್ಲಿ ಸೇನಾಡಳಿತ ಜಾರಿಗೆ ಯತ್ನ… ದಂಗೆಯೆದ್ದ ಜನರು

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್‌ ಸುಕ್‌ ಯೋಲ್‌ ದೇಶದಲ್ಲಿ ಮಾರ್ಷಲ್‌ ಕಾನೂನು (ಮಿಲಿಟರಿ ಆಳ್ವಿಕೆ) ಹೇರಿದ್ದರು. ಅಧ್ಯಕ್ಷರ ಈ ಕ್ರಮವನ್ನು ಖಂಡಿಸಿ ಜನರು ಪ್ರತಿಭಟನೆ ನಡೆಸಿದ್ದರು. ಜನಾಕ್ರೋಶಕ್ಕೆ ಮಣಿದ ಯೋಲ್‌ ಮಿಟಿಟರಿ ಆಳ್ವಿಕೆಯನ್ನು ವಾಪಸ್‌ ಪಡೆದಿದ್ದಾರೆ.

ಸಿಯೋಲ್‌: ಅಚ್ಚರಿಯ ಬೆಳವಣಿಗೆಯಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್‌ ಸುಕ್‌ ಯೋಲ್‌ ದೇಶದಲ್ಲಿ ಮಾರ್ಷಲ್‌ ಕಾನೂನು (ಮಿಲಿಟರಿ ಆಳ್ವಿಕೆ) ಹೇರಿದ್ದರು. ಅಧ್ಯಕ್ಷರ ಈ ಕ್ರಮವನ್ನು ಖಂಡಿಸಿ ಜನರು ಪ್ರತಿಭಟನೆ ನಡೆಸಿದ್ದರು. ಜನಾಕ್ರೋಶಕ್ಕೆ ಮಣಿದ ಯೋಲ್‌ ಮಿಟಿಟರಿ ಆಳ್ವಿಕೆಯನ್ನು ವಾಪಸ್‌ ಪಡೆದಿದ್ದಾರೆ.

ಸಂಸತ್ತಿನಲ್ಲಿ ಬಹುಮತ ಹೊಂದಿರುವ ಪ್ರತಿಪಕ್ಷಗಳ ಜತೆ ಸಂಘರ್ಷಕ್ಕೆ ಇಳಿದಿದ್ದ ಅಧ್ಯಕ್ಷ ಯೂನ್‌ ಸುಕ್‌ ಯೋಲ್‌ ಮಂಗಳವಾರ ರಾತ್ರಿ ದಿಢೀರ್‌ ಎಂದು ಮಾರ್ಷಲ್‌ ಕಾನೂನು ಹೇರಿಕೆ ಮಾಡಿದ್ದರು. ದೇಶದ್ರೋಹಿ ಶಕ್ತಿಗಳನ್ನು ಮಟ್ಟ ಹಾಕಲು ಈ ನಿರ್ಣಯ ತೆಗೆದುಕೊಂಡಿರುವುದಾಗಿ ಸಮರ್ಥಿಸಿಕೊಂಡಿದ್ದರು. ಈ ಮೂಲಕ 50 ವರ್ಷದಲ್ಲೇ ಮೊದಲ ಬಾರಿಗೆ ದೇಶದಲ್ಲಿ ಮಾರ್ಷಲ್‌ ಕಾನೂನು ಜಾರಿಯಾಗಿತ್ತು.

ಇನ್ನು ಅಧ್ಯಕ್ಷ ಭಾಷಣ ಮುಗಿಯುತ್ತಿದ್ದಂತೆ ಸಭೆ ಸೇರಿದ ಸಂಸತ್ತು ಮಾರ್ಷಲ್‌ ಕಾನೂನು ತೆರವುಗೊಳಿಸುವ ಪರ ಮತ ಚಲಾವಣೆ ಮಾಡಿತ್ತು. ಆ ಬಳಿಕ ಅಧ್ಯಕ್ಷರು ಮಾರ್ಷಲ್‌ ಕಾನೂನು ತೆರವುಗೊಳಿಸುವವರೆಗೆ ಸಂಸತ್ತಿನಿಂದ ಹೊರಗೆ ಹೋಗುವುದಿಲ್ಲ ಎಂದು ವಿಪಕ್ಷ ನಾಯಕ ಲೀ ಜೇ ಮ್ಯೂಂಗ್‌ ತಿಳಿಸಿದ್ದರು. ಇನ್ನು ಮಾರ್ಷಲ್‌ ಕಾನೂನು ಜಾರಿಯಾಗುತ್ತಿದ್ದಂತೆ ಸೇನೆ ಸಂಸತ್‌ ಭವನವನ್ನು ವಶಕ್ಕೆ ಪಡೆದುಕೊಂಡಿತ್ತು.

ಇದರ ನಡುವೆಯೇ ಮಿಲಿಟರಿ ಆಳ್ವಿಕೆ ಜಾರಿ ವಿಷಯ ತಿಳಿಯುತ್ತಿದ್ದಂತೆ ದಕ್ಷಿಣ ಕೊರಿಯಾದ ಜನತೆ ಅಧ್ಯಕ್ಷ ವಿರುದ್ಧ ದಂಗೆಯೆದ್ದಿದ್ದರು. ಸಂಸತ್‌ ಭವನದ ಮುಂದೆ ಹಾಗೂ ರಸ್ತೆಗಳಲ್ಲಿ ಜಮಾಯಿಸಿದ ಜನರು ಪ್ರತಿಭಟನೆ ನಡೆಸಿ ಮಾರ್ಷಲ್‌ ಕಾನೂನು ವಾಪಸ್‌ ಪಡೆಯುವಂತೆ ಒತ್ತಾಯಿಸಿದ್ದರು. 6 ಗಂಟೆಗಳ ಹೈಡ್ರಾಮಾ ಬಳಿಕ ಬುಧವಾರ ಬೆಳಗಿನ ಜಾವ 4.30 ರ ವೇಳೆಗೆ ಅಧ್ಯಕ್ಷರು ಮಾರ್ಷಲ್‌ ಕಾನೂನನ್ನು ವಾಪಸ್‌ ಪಡೆದು, ಸೇನೆ ವಾಪಸ್ಸಾತಿಗೆ ಆದೇಶಿಸಿದ್ದರು. ಆದರೆ ಪ್ರತಿಭಟನಾಕಾರರು ಮತ್ತು ಸಂಸದರು ಅಧ್ಯಕ್ಷ ಯೋಲ್‌ರ ವಾಗ್ದಂಡನೆಗೆ ಒತ್ತಾಯಿಸಿದ್ದಾರೆ.

ಸರ್ಕಾರ ಅಥವಾ ದೇಶದ ಭದ್ರತೆಗೆ ಅಪಾಯ ಎದುರಾದಾಗ ಹೇರುವ ತುರ್ತು ಪರಿಸ್ಥಿತಿಯನ್ನು ಮಾರ್ಷಲ್‌ ಕಾನೂನು ಎನ್ನಲಾಗುತ್ತೆ. ಮಾರ್ಷಲ್‌ ಕಾನೂನು ವೇಳೆ ಸೇನೆ ದೇಶದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ.