ವೈರಲ್

ಮೆಟ್ರೋ ಪ್ರಯಾಣ ದರ ಏರಿಕೆ ಹೊಣೆ ರಾಜ್ಯದ ಮೇಲೆ ಬೇಡ - ರಾಮಲಿಂಗಾರೆಡ್ಡಿ

ಮೆಟ್ರೋ ಪ್ರಯಾಣ ದರ ದುಪ್ಪಟ್ಟು ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸಿದ ರಾಜ್ಯ

ಬೆಂಗಳೂರು - ನಮ್ಮ ಮೆಟ್ರೋ ಟ್ರೈನ್‌ ಪ್ರಯಾಣ ದರ ಏಕಾಏಕಿ ದುಪ್ಪಟ್ಟು ಮಾಡಲಾಗಿದೆ. ಈ ಸಂಬಂಧ ಪ್ರಯಾಣಿಕರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸುದ್ದಿಗೋಷ್ಟಿ ಮಾಡಿದ್ದಾರೆ. ಬಿಜೆಪಿ ಮೆಟ್ರೋ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ.  ಎಷ್ಟು ದಿವಸ ಅಂತ ಈ ರೀತಿಯ ಬುಟಾಟಿಕೆ ರಾಜಕೀಯ ಮಾಡುತ್ತಾ ತಿರುಗುತ್ತೀರಾ..? ಪಾಪ ಕೇಂದ್ರ ರೈಲ್ವೆ ಸಚಿವರಿಗೂ ಸುಳ್ಳಿನ ಸರದಾರ ಎಂಬ ಕುಖ್ಯಾತಿ ನೀಡಿದ ಕೀರ್ತಿ ಬಿಜೆಪಿ ಅವರದ್ದು , ಕರ್ನಾಟಕದ ಅದರಲ್ಲೂ ಬೆಂಗಳೂರಿನ ಬಿಜೆಪಿ ನಾಯಕರು ಅಜ್ಞಾನಿಗಳೆಂದು ಜನರಿಗೆ ಗೊತ್ತಿದೆ ಎಂದರು. 

ಇನ್ನೂ , ಆಶ್ಚರ್ಯಕರ ಸಂಗತಿ ಎಂದರೆ, ಕೇಂದ್ರ ಸಚಿವ ಅದರಲ್ಲೂ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ರನ್ನ ಇಲ್ಲಿಗೆ ಕರೆಯಿಸಿ , ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಮೆಟ್ರೋ ದರ ಏರಿಕೆ ಮಾಡಿದ್ದು ಎಂದು ಸ್ವಲ್ಪವೂ ಕೂಡ ಅಂಜಿಕೆ ಅಳುಕಿಲ್ಲದೆ ಸುಳ್ಳು ಹೇಳಿಕೆ ನೀಡಿರುವುದನ್ನು ನೋಡಿದರೆ, ಕೇಂದ್ರ ಸಚಿವರೂ ಕೂಡ ಅಜ್ಞಾನಿಯೇ..?  ಕೇಂದ್ರ ಸಚಿವರಿಂದ ಹೇಳಿಕೆ ಕೊಡಿಸಿ ಜನರನ್ನು ಮೂರ್ಖರನ್ನು ಮಾಡುವ ಬುರುಡೆ ಪಕ್ಷದ ತಂತ್ರಗಾರಿಕೆಯೇ..? ಪಾಪ ಕೇಂದ್ರ ಸಚಿವರಿಗೆ ಈ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲವೇ..? ಇಂತಹವರ ಕೈಯಲ್ಲಿ ಕೇಂದ್ರ ರೈಲ್ವೆ ಇಲಾಖೆ ಇದೆಯೇ..? ಇವೆಲ್ಲದಕ್ಕೆ ಬಿಜೆಪಿ ಅವರು ಉತ್ತರಿಸಬೇಕು.

ತೇಜಸ್ವಿ ಸೂರ್ಯ ಪಾಪ ಚಿಕ್ಕ ವಯಸ್ಸು, ಪ್ರಚಾರದ ಗೀಳು ಜಾಸ್ತಿನೇ , ಅದರಲ್ಲಿಯೂ ಪ್ರತಿ ಬಾರಿ ಮೆಟ್ರೋ ತಂದಿದ್ದೇ ನಾನು ಎಂದು ಪೋಸ್ ಕೊಟ್ಟು ಬಿಟ್ಟಿ ಪ್ರಚಾರ ತೆಗೆದುಕೊಳ್ತಿದ್ದಾರೆ. ಈಗ ದರ ಏರಿಕೆಯನ್ನು ರಾಜ್ಯ ಸರ್ಕಾರ ಮಾಡಿದ್ದು ಎಂದು ಸುಳ್ಳು ಹೇಳ್ತಿದ್ದಾರೆ. ಈ ಹಿಂದೆ ರಾಜ್ಯದ ಸಿಎಂ ಆಗಿದ್ದ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಕೂಡ ಇದೇ  ರೀತಿ ಸುಳ್ಳು ಹೇಳ್ತಿದ್ದಾರೆ. ಇವರ ಕಾಲದಲ್ಲಿ ರಾಜ್ಯದಲ್ಲಿ ಯಾವ ರೀತಿಯ ಆಡಳಿತ ನಡೆಸಿರಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇವರನ್ನು ಯಾರ ರೀತಿ ಸಿಎಂ ಆಗಿ ಬಿಜೆಪಿ‌ ಮಾಡಿತ್ತೋ‌ ಗೊತ್ತಿಲ್ಲ. ಮೆಟ್ರೋ ಕಾಯಿದೆ 2002ರ ಸೆಕ್ಷನ್ 34 ರ ಪ್ರಕಾರ ದರ ಏರಿಕೆ ಮಾಡಲು ಅವಕಾಶವಿದ್ದು. ಅದರ ಪ್ರಕಾರ ಮೆಟ್ರೋ ಇರುವ ಎಲ್ಲಾ ರಾಜ್ಯಗಳು ದರ ಏರಿಕೆ ಮಾಡಲು ಕೋರಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಾರೆ ಎಂದರು. 

ಈ ಪತ್ರವನ್ನು ಆಧರಿಸಿ ಕೇಂದ್ರ ಸರ್ಕಾರವು ದರ ಏರಿಕೆ ಮಾಡಲು ಸಮಿತಿಯನ್ನು ರಚಿಸುತ್ತದೆ. ಅದೇ ರೀತಿ ಬೆಂಗಳೂರು ನಮ್ಮ ಮೆಟ್ರೋದವರು ಸಹ ಪತ್ರ ಬರೆದಿದ್ದು ಅದರಂತೆ , ದಿನಾಂಕ 07.09.2024 ರಂದು ಕೇಂದ್ರ ಸರ್ಕಾರದ ಪತ್ರ ಸಂಖ್ಯೆ 26/01/2021-EO-SMII ದರ ಏರಿಕೆ ಕುರಿತು ಸಮಿತಿಯನ್ನು ರಚಿಸಿದೆ. ಕೇಂದ್ರ ಸರ್ಕಾರವು ರಚಿಸಿರುವ ಸಮಿತಿಯ ಅಧ್ಯಕ್ಷರು ಮದ್ರಾಸ್ ಹೈಕೋರ್ಟ್ ನ ಹಿಂದಿನ  ಜಡ್ಜ್  ಆರ್. ತಾರಿಣಿ , ಸತೀಂದರ್ ಪಾಲ್ ಸಿಂಗ್ ಭಾಆಸೇ, ಹೆಚ್ಚುವರಿ ಕಾರ್ಯದರ್ಶಿ, ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ, ರಮಣ ರೆಡ್ಡಿ, ಭಾಆಸೇ(ನಿ) ರವರು ಸಮಿತಿಯ ಸದಸ್ಯರುಗಳು ಇದ್ದಾರೆ. ಸದರಿ ಸಮಿತಿಯು ದರ ಏರಿಕೆ ಮಾಡುವುದರ ಬಗ್ಗೆ, ವರದಿ ನೀಡಿರುತ್ತದೆ. ಈ ಸಮಿತಿಯು ರಾಜ್ಯ ಸರಕಾರಕ್ಕೆ ಯಾವುದೇ ವರದಿ ಸಲ್ಲಿಸುವುದಿಲ್ಲ. ಮೆಟ್ರೋ ಕಾಯಿದೆಯ ಅನುಸಾರ ಸಮಿತಿಯ ದರ ಏರಿಕೆ ಶಿಫಾರಸ್ಸನ್ನು/ವರದಿಯನ್ನು ಮೆಟ್ರೋ ಮಂಡಳಿ ಸಭೆಯಲ್ಲಿ ಮಂಡಿಸಿ, ಅನುಮತಿ ಪಡೆದು ನಂತರ ಜಾರಿಗೆ ತರಬೇಕಾಗಿರುತ್ತದೆ. ಸಮಿತಿಯ ಶಿಫಾರಸ್ಸು ಅನ್ನು ಮೆಟ್ರೋ ಮಂಡಳಿ ಸಭೆಯಲ್ಲಿ ಮಂಡಿಸುತ್ತಾರೆ. ಈ ಸಭೆಯ ಅಧ್ಯಕ್ಷರು ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ , ಮೆಟ್ರೋ ಮಂಡಳಿ ಸಭೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿ ಒಬ್ಬ ಸದಸ್ಯರಾಗಿರುತ್ತಾರೆ ಅಷ್ಟೇ. ಮಂಡಳಿಯ ಅಧ್ಯಕ್ಷರು, ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗಳು, ದರ ಏರಿಕೆಯನ್ನು ಅಂತಿಮಗೊಳಿಸುತ್ತಾರೆ. ಮೆಟ್ರೋ ದವರು ದರ ಏರಿಕೆ ಶಿಫಾರಸ್ಸನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದಿಲ್ಲ. ದೇಶದಲ್ಲಿ ಮೆಟ್ರೋ ಹೊಂದಿರುವ ಎಲ್ಲಾ ರಾಜ್ಯಗಳಿಗೂ ಇದೇ ಮಾನದಂಡವನ್ನು ಅನುಸರಿಸಲಾಗುತ್ತದೆ. ಮೆಟ್ರೋ ಬೆಂಗಳೂರಿಗೆ ತಂದಿದ್ದು ದೂರದೃಷ್ಟಿಯುಳ್ಳ ಕಾಂಗ್ರೆಸ್ ಸರ್ಕಾರ. ಬುರುಡೆ ಪಕ್ಷದ ಕೆಲವು ನಾಯಕರು ಮೆಟ್ರೋ ತಂದಿದ್ದೇ ನಾವು ಎಂದು ಪ್ರತಿದಿನ ಪೋಸ್ ಕೊಡುತ್ತಿದ್ದವರು.ಇಂದು ದರ ಏರಿಕೆಗೆ ಕಾರಣ ರಾಜ್ಯ ಸರ್ಕಾರ ಎಂದು ಕೈ ತೋರಿಸಿ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ಬಿಜೆಪಿ ಅವರಿಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಎದೆಗಾರಿಕೆ ಇಲ್ಲ ಎಂದರು.