ವಿದೇಶ

ರಷ್ಯಾ ತಲುಪಿದ ಸಿರಿಯಾ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌… ಪುಟಿನ್‌ ಆಶ್ರಯ

ಸಿರಿಯಾ ಬಂಡುಕೋರರು ರಾಜಧಾನಿ ಡಮಾಸ್ಕಸ್‌ ಅನ್ನು ವಶಪಡಿಸಿಕೊಂಡ ಬಳಿಕ ದೇಶ ತೊರೆದು ಪಲಾಯನನ ಮಾಡಿದ್ದ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ ರಷ್ಯಾ ತಲುಪಿದ್ದಾರೆ. ರಷ್ಯಾ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ.

ಮಾಸ್ಕೋ: ಸಿರಿಯಾ ಬಂಡುಕೋರರು ರಾಜಧಾನಿ ಡಮಾಸ್ಕಸ್‌ ಅನ್ನು ವಶಪಡಿಸಿಕೊಂಡ ಬಳಿಕ ದೇಶ ತೊರೆದು ಪಲಾಯನನ ಮಾಡಿದ್ದ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ ರಷ್ಯಾ ತಲುಪಿದ್ದಾರೆ. ರಷ್ಯಾ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ.

ಬಂಡುಕೋರರ ಪಡೆಗಳು ಒಂದೊಂದೇ ನಗರಗಳನ್ನು ವಶಪಡಿಸಿಕೊಳ್ಳುತ್ತಾ ಡಮಾಸ್ಕಸ್‌ ಮೇಲೆ ಭಾನುವಾರ ದಾಳಿ ನಡೆಸಿದ್ದವು. ಬಂಡುಕೋರರ ದಾಳಿಗೆ ಬೆದರಿಕೆ ಸಿರಿಯಾ ಸೇನೆ ಸೋಲಪ್ಪಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿರಿಯಾ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ ತನ್ನ ಕುಟುಂಬದೊಂದಿಗೆ ನಿಗೂಢವಾಗಿ ಕಣ್ಮರೆಯಾಗಿದ್ದರು. ಅಸ್ಸಾದ್‌ ತೆರಳುತ್ತಿದ್ದ ವಿಮಾನ ಪತನವಾಗಿದೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಅಸ್ಸಾದ್‌ ತನ್ನ ಮಿತ್ರ ರಾಷ್ಟ್ರಗಳಿಗೆ ತೆರಳಿರಬಹುದು ಎಂದು ಶಂಕಿಸಲಾಗಿತ್ತು. ನಿರೀಕ್ಷೆಯಂತೆ ಭಾನುವಾರ ರಾತ್ರಿ ಅಸ್ಸಾದ್‌ ತಮ್ಮ ಅತ್ಯಾಪ್ತ ಮಿತ್ರ ರಷ್ಯಾದ ರಾಜಧಾನಿ ತಲುಪಿದ್ದಾರೆ. ಈ ಸಂಬಂಧ ರಷ್ಯಾದ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ರಷ್ಯಾ ಸರ್ಕಾರ ಅಸ್ಸಾದ್‌ಗೆ ಆಶ್ರಯ ನೀಡಿರುವ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ.

ಬಶರ್‌ ಅಲ್‌ ಅಸ್ಸಾದ್‌ ದೇಶ ಬಿಟ್ಟು ಪಲಾಯನ ಮಾಡುತ್ತಿದ್ದಂತೆ ಅವರ ಅರಮನೆ ಮೇಲೆ ಬಂಡುಕೋರರು ಮತ್ತು ಜನರು ದಾಳಿ ನಡೆಸಿದ್ದರು. ಅರಮನೆ ಮೇಲೆ ದಾಳಿ ನಡೆಸಿದವರು ಅಲ್ಲಿ ಸಿಕ್ಕ ಪ್ರತಿಯೊಂದು ವಸ್ತುವನ್ನೂ ತಮ್ಮ ಜತೆ ಕೊಂಡೋಯ್ದಿದ್ದಾರೆ. ಅಸ್ಸಾದ್‌ ಅರಮನೆಯಲ್ಲಿದ್ದ ಕುರ್ಚಿಗಳು, ತಟ್ಟೆ, ಲೋಟ, ಪ್ಲೇಟ್‌ ಗಳನ್ನೂ ಸಹ ಜನರು ಹೊತ್ತೋಯ್ದಿದ್ದಾರೆ. ಇತ್ತೀಚೆಗೆ ಬಾಂಗ್ಲಾದ ಪ್ರಧಾನಿ ಶೇಖ್‌ ಹಸೀನಾ ದೇಶ ತೊರೆದಾಗಲೂ ಅವರ ಮನೆಯನ್ನು ಲೂಟಿ ಮಾಡಲಾಗಿತ್ತು. ಶ್ರೀಲಂಕಾದಲ್ಲಿ ದಂಗೆ ಎದ್ದಾಗಲೂ ಜನರು ಅಲ್ಲಿನ ಅಧ್ಯಕ್ಷರ ಮನೆಗೆ ನುಗ್ಗಿ ಲೂಟಿ ಮಾಡಿದ್ದರು.