ಡಮಾಸ್ಕಸ್: ಸಿರಿಯಾವನ್ನು ಜಿಹಾದಿ ಪಡೆಗಳು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ದೇಶದಿಂದ ಪಲಾಯನ ಮಾಡಿದ್ದಾರೆ. ಅಸ್ಸಾದ್ ಪಲಾಯನ ಮಾಡುವಾಗ ಅವರ ವಿಮಾನ ಪತನವಾಗಿದೆ ಎಂಬ ಚರ್ಚೆ ಶುರುವಾಗಿದೆ.
ಜಿಹಾದಿ ಪಡೆಗಳು ಸಿರಿಯಾ ರಾಜಧಾನಿ ಡಮಾಸ್ಕಸ್ ಅನ್ನು ವಶಕ್ಕೆ ಪಡೆದಿವೆ. ಈ ಹಿನ್ನೆಲೆಯಲ್ಲಿ ಬಶರ್ ಅಲ್ ಅಸ್ಸಾದ್ ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಸ್ಸಾದ್ ಎಲ್ಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅಸ್ಸಾದ್ ಪ್ರಯಾಣಿಸುತ್ತಿದ್ದ ವಿಮಾನ ಹೊಮ್ಸ್ ನಗರದ ಬಳಿ ಪತನವಾಗಿದೆ ಎನ್ನಲಾಗ್ತಿದೆ. ಫ್ಲೈಟ್ ರಡಾರ್ ಡೇಟಾ ಪ್ರಕಾರ ವಿಮಾನ ಯು ಟರ್ನ್ ಮಾಡಿ ಪತನವಾಗಿದೆ ಎಂದು ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಸ್ಸಾದ್ ವಿಮಾನ ನಿಜವಾಗಿಯೂ ಪತನವಾಗಿದೆಯಾ ಎಂಬ ಚರ್ಚೆ ಶುರುವಾಗಿದೆ.
ಅಧ್ಯಕ್ಷ ಅಸ್ಸಾದ್ ಅವರ ಕಣ್ಮರೆಯ ಕುರಿತು ಶನಿವಾರ ರಾತ್ರಿ ಸೌದಿ ಟೆಲಿವಿಷನ್ ನೆಟ್ವರ್ಕ್ ಅಲ್-ಅರೇಬಿಯಾಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೊಹಮ್ಮದ್ ಘಾಜಿ ಅಲ್-ಜಲಾಲಿ ಅವರು ಅಧ್ಯಕ್ಷ ಅಸ್ಸಾದ್ ಮತ್ತು ಅವರ ಪತ್ನಿ ಅಸ್ಮಾ ಹಾಗೂ ಇಬ್ಬರು ಮಕ್ಕಳೂ ಎಲ್ಲಿದ್ದಾರೆಂದು ನನಗೆ ತಿಳಿದಿಲ್ಲ . ಅವರು ಸರ್ಕಾರದೊಂದಿಗೆ ಸಂಪೂರ್ಣ ಸಂವಹನವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು.
ಮತ್ತೊಂದಿಷ್ಟು ವರದಿಗಳ ಪ್ರಕಾರ ಜಿಹಾದಿ ಪಡೆಗಳ ವಿರುದ್ಧ ಹಿನ್ನಡೆ ಆಗುತ್ತಿದ್ದಂತೆ ಅಸ್ಸಾದ್ ದೇಶ ತೊರೆದಿದ್ದಾರೆ, ಅವರು ರಷ್ಯಾ ಅಥವಾ ಇರಾನ್ ನಲ್ಲಿ ಆಶ್ರಯ ಪಡೆದಿರಬಹುದು ಎನ್ನಲಾಗುತ್ತಿದೆ. ಇನ್ನು ಅಸ್ಸಾದ್ ಡಮಾಸ್ಕಸ್ ಮೇಲೆ ಬಂಡುಕೋರರು ಆಕ್ರಮಣ ಮಾಡುವುದಕ್ಕೂ ಸ್ವಲ್ಪ ಮೊದಲು ಮಾಸ್ಕೋಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಇದರ ನಡುವೆ ಇರಾನ್ ಸುದ್ದಿ ಸಂಸ್ಥೆಗಳು ಡಮಾಸ್ಕಸ್ನಲ್ಲಿ ಅಸ್ಸಾದ್ ಅವರು ಇರಾನ್ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗುತ್ತಿರುವ ಫೋಟೋಗಳನ್ನು ಪ್ರಕಟಿಸಿದ್ದವು.