ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಿರುವ ತಾಲಿಬಾನಿಗಳು ಮಹಿಳೆಯ ಕುರಿತಾಗಿ ಹೊಸ ಕಾನೂನು ಜಾರಿಗೆ ತಂದಿದ್ದು, ಇದರ ಅನ್ವಯ ಮಹಿಳೆಯರು ಇರುವ ಮನೆಗಳಿಗೆ ನಿಗದಿತ ಭಾಗದಲ್ಲಿ ಕಿಟಕಿಗಳನ್ನು ಇಡುವಂತಿಲ್ಲ.
2021 ರಲ್ಲಿ ಅಫ್ಘನ್ ಸರ್ಕಾರವನ್ನು ಪತನಗೊಳಿಸಿ ಅಧಿಕಾರ ಹಿಡಿದಿರುವ ತಾಲಿಬಾನಿಗಳು ಈಗಾಗಲೇ ಮಹಿಳೆಯರ ಕುರಿತು ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಮಹಿಳೆಯರು ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಪಾರ್ಕ್, ಬ್ಯೂಟಿ ಪಾರ್ಲರ್, ಶಾಲೆ, ಕಾಲೇಜುಗಳಿಗೆ ಹೋಗುವಂತಿಲ್ಲ. ಸಾರ್ವಜನಿಕವಾಗಿ ಹಾಡುವಂತಿಲ್ಲ ಎಂಬ ಕಾನೂನುಗಳನ್ನು ಜಾರಿಗೆ ತರಲಾಗಿದೆ.
ಈಗ ಇದರ ಜತೆಯಲ್ಲೇ ಹೊಸ ಕಾನೂನು ಜಾರಿಗೆ ಬಂದಿದ್ದು ಇದರ ಅನ್ವಯ ಹೊಸದಾಗಿ ಕಟ್ಟಡಗಳ ನಿರ್ಮಾಣ ಮಾಡುವಾಗ ಮಹಿಳೆಯರಿರುವ ವಸತಿ ಕಟ್ಟಡದಲ್ಲಿ ಕಿಟಕಿಯನ್ನು ನಿರ್ಮಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಹಿಳೆಯರ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಈ ಕಾನೂನನ್ನು ಹೊರಡಿಸಲಾಗಿದೆ. ಇನ್ನು ಆಸ್ತಿ ಮಾಲೀಕರಿಗೆ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸಲಾಗಿದೆ. ಮನೆಯನ್ನು ನಿರ್ಮಿಸುವ ವ್ಯಕ್ತಿಗಳು ಮಹಿಳೆಯರಿರುವ ಅಡುಗೆ ಮನೆ, ಅಂಗಳ, ಬಾವಿ ಇತರೆ ಸ್ಥಳಗಳಲ್ಲಿ ಕಿಟಕಿಗಳನ್ನು ನಿರ್ಮಿಸಬಾರದು ಎಂದು ತಾಲಿಬಾನ್ ಎಚ್ಚರಿಕೆ ನೀಡಿದೆ. ಈ ಮೊದಲೇ ನಿರ್ಮಿತವಾಗಿರುವ ಕಟ್ಟಡಗಳು ಈ ನಿರ್ದೇಶನಗಳನ್ನು ಉಲ್ಲಂಘಿಸುವ ಕಿಟಕಿ ಹೊಂದಿದ್ದರೆ ಮಾಲೀಕರು ಗೋಡೆಯನ್ನು ನಿರ್ಮಿಸಬೇಕು ಎಂದು ತಾಲಿಬಾನ್ ಸರ್ಕಾರ ಸೂಚನೆ ನೀಡಿದೆ.