ರಾಜ್ಯದೆಲ್ಲೆಡೆ ಗಣೇಶೋತ್ಸವದ ಸಂಭ್ರಮ ಮನೆ ಮಾಡಿರುವಾಗ, ಇಲ್ಲೊಂದು ಕಡೆ ದುರಂತ ನಡೆದು ಹೋಗಿದೆ. ಹಬ್ಬಕ್ಕೆ ಕೂರಿಸಲೆಂದು ಗಣೇಶ ಮೂರ್ತಿ ತರಲು ಹೋಗುತ್ತಿದ್ದ ವೇಳೆ, ಟಾಟಾ ಏಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ. 20 ವರ್ಷದ ಶ್ರೀಧರ್ ಹಾಗೂ ಧನುಷ್ ಎಂಬುವರು ಸ್ಥಳದಲ್ಲೇ ಅಸುನೀಗಿದ್ದಾರೆ.
ಹಬ್ಬಕ್ಕೆ ಕೂರಿಸುವ ಗಣೇಶ ಮೂರ್ತಿ ತರಲು 9 ಜನ ಯುವಕರು ಹೋಗುತ್ತಿದ್ದರು. ಈ ವೇಳೆ ಭೈರಾಪುರ ಗೇಟ್ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿ ಬಿದ್ದಿದೆ. ಇದರ ಪರಿಣಾಮ ಇಬ್ಬರು ಯುವಕರ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ತಕ್ಷಣ ಯುವಕರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಯುವಕರನ್ನು ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹಾಗೂ ಗಾಯಾಳುಗಳೆಲ್ಲರು ಲಿಂಗದಹಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ. ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.