ಅಡಿಲೇಡ್: ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಆಡಲು ಆಸ್ಟ್ರೇಲಿಯಾಗೆ ತೆರಳಿರುವ ಟೀಂ ಇಂಡಿಯಾ ಆಟಗಾರರ ಅಭ್ಯಾಸಕ್ಕೆ ಫ್ಯಾನ್ಸ್‌ಗಳು ಅಡ್ಡಿಪಡಿಸಿದ್ದಾರೆ. ಜತೆಗೆ ಆಟಗಾರರ ಬಾಡಿ ಶೇಮಿಂಗ್ ಮಾಡಿದ್ಧಾರೆ.
ಪರ್ತ್ ಟೆಸ್ಟ್ ನಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಅಡಿಲೇಡ್ ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದ್ದಾರೆ. ಪಿಂಕ್ ಬಾಲ್ ಟೆಸ್ಟ್‌ಗಾಗಿ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿರುವ ವೇಳೆ ಅಭಿಮಾನಿಗಳು ಅಭ್ಯಾಸಕ್ಕೆ ಅಡ್ಡಿಯುಂಟು ಮಾಡಿದ್ದಾರೆ.
ಮಂಗಳವಾರ ಅಡಿಲೇಡ್ ಸ್ಟೇಡಿಯಂ ನಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ಭಾಗಿಯಾಗಿದ್ದರು.ಈ ಬಾರಿ ಅಭ್ಯಾಸವನ್ನು ನೋಡಲು ಅಭಿಮಾನಿಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 3000 ಅಭಿಮಾನಿಗಳು ಸ್ಟೇಡಿಯಂನಲ್ಲಿ ನೆರೆದಿದ್ದರು. ಆದರೆ ಈ ವೇಳೆ ಅಭಿಮಾನಿಗಳು ಜೋರಾಗಿ ಬೊಬ್ಬೆ ಹಾಕುತ್ತಾ ವಿವಿಧ ರೀತಿಯಲ್ಲಿ ಅಡ್ಡಿಪಡಿಸಿದ್ದಾರೆ.
ಸಾಮಾನ್ಯವಾಗಿ, ಅಂತಾರಾಷ್ಟ್ರೀಯ ಪಂದ್ಯಕ್ಕೆ ಮುಂಚಿತವಾಗಿ ನಡೆಯುವ ಅಭ್ಯಾಸ ಅವಧಿ ಸಮಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಆದರೆ, ಈ ಬಾರಿ ಸ್ಥಳೀಯ ಅಡಿಲೇಡ್ ಪ್ರೇಕ್ಷಕರಿಗೆ ಅಭ್ಯಾಸ ನೋಡುವ ಅವಕಾಶ ನೀಡಲಾಗಿತ್ತು. ಆದರೆ ಈ ವೇಳೆ ಕೆಲವು ಅಭಿಮಾನಿಗಳು ಆಟಗಾರರ ಬಗ್ಗೆ ಅಸಂಬದ್ಧ ಕಾಮೆಂಟ್ ಮಾಡಿದ್ದಾರೆ. ಜತೆಗೆ ಟೀಂ ಇಂಡಿಯಾದ ಆಟಗಾರರ ಬಾಡಿ ಶೇಮಿಂಗ್ ಮಾಡಿದ್ದಾರೆ.
ಜತೆಗೆ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಸಿಕ್ಸರ್ ಬಾರಿಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ವಿರಾಟ್ ಕೊಹ್ಲಿ ಮತ್ತು ಶುಭಮಾನ್ ಗಿಲ್ ಹೆಚ್ಚು ತೊಂದರೆಗೊಳಗಾದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ ಟೀಂ ಇಂಡಿಯಾದ ಅಭ್ಯಾಸ ವೀಕ್ಷಿಸಲು ಅಭಿಮಾನಿಗಳಿಗೆ ನಿಷೇಧ ಹೇರಲಾಗಿದೆ.