ಬೆಂಗಳೂರು : ನನ್ನ ಅತ್ತೆಯನ್ನ ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಮಹಿಳೆ ಒಬ್ಬರು ಡಾಕ್ಟರ್‌ಗೆ ಮೆಸೇಜ್ ಮಾಡಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹೌದು ವೈದ್ಯರಿಗೆ ಮೆಸೇಜ್ ಮಾಡಿದ ಮಹಿಳೆಯನ್ನ ಸಂಜಯ್ ನಗರ ಪೊಲೀಸರು ಪತ್ತೆ ಮಾಡಿದ್ದಾರೆ. ಕೊಳ್ಳೇಗಾಲ ಮೂಲದ ಸಹನ ಬೆಂಗಳೂರು ಚೌಟ್ರಿಪಾಳ್ಯದಲ್ಲಿ ವಾಸವಾಗಿದ್ದು, ಅತ್ತೆಯನ್ನ ಸಾಯಿಸಲು ಮಾತ್ರ ಹೇಳಿ ಎಂದು ಡಾಕ್ಟರ್‌ಗೆ ಮೆಸೇಜ್ ಮಾಡಿದ್ದಳು.
ತನಿಖೆ ವೇಳೆ ಮಹಿಳೆ ಸತ್ಯ ಬಾಯಿ ಬಿಟ್ಟಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಹಿಳೆಗೆ ಮದುವೆಯಾಗಿದ್ದು ಒಂದೂವರೆ ವರ್ಷದ ಮಗು ಸಹ ಇದೆ. ಜೊತೆಗೆ ಗಂಡ ಕ್ಯಾಬ್ ಚಾಲಕನಾಗಿದ್ದು ಆತನೇ ನಿನ್ನೆ ಮಹಿಳೆಯನ್ನ ಪೊಲೀಸ್ ಠಾಣೆಗೆ ಕರೆತಂದಿದ್ದ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ವೈದ್ಯರಿಗೆ ಮೆಸೇಜ್ ಮಾಡಿದ್ದಾಳೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಮಹಿಳೆ ವಿಚಾರಣೆಯಲ್ಲಿ ತಾನೇ ಸಾಯಲು ಮಾತ್ರೆ ಕೇಳಿದ್ದು, ಅತ್ತೆ ಹಾಗೂ ಮಹಿಳೆ ನಡುವೆ ಯಾವುದೇ ಗಲಾಟೆ ಇರಲಿಲ್ಲ ಎಂಬುದು ತಿಳಿದು ಬಂದಿದೆ. ಗೂಗಲ್ ಸರ್ಚ್ ಮಾಡಿ ಡಾಕ್ಟರ್ ನಂಬರ್ ಪಡೆದಿದ್ದ ಮಹಿಳೆ, ಡಾಕ್ಟರ್‌ಗೆ ಮೆಸೇಜ್ ಮಾಡಿದ್ದಳು. ಖುದ್ದು ಡಾಕ್ಟರ್ ಮುಂದೆಯೇ ಸಂಜಯ್ ನಗರ ಪೊಲೀಸರು ಮಹಿಳೆ ವಿಚಾರಣೆ ಮಾಡಿದ್ದಾರೆ. ಸದ್ಯ ಮಹಿಳೆಗೆ ಪೊಲೀಸರು ಕೌನ್ಸಲಿಂಗ್ ನೀಡುತ್ತಿದ್ದಾರೆ.