ದೇಶ

ಖಾಸಗಿ ಕಂಪನಿಯ ಔಷಧಿ ಸಿಂಪಡಿಸಿ ಬೆಳೆ ನಾಶ..ಅನ್ನದಾತನ ಕಣ್ಣಲ್ಲಿ ನೀರು.!!

ಅಸಗೋಡು ಗ್ರಾಮದ ಬೀರಲಿಂಗೇಶ್ ಎಂಬ ರೈತ, ತನಗಿದ್ದ ಒಂದುವರೆ ಎಕೆರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದ. ಬೆಳೆ ಕೂಡ ಉತ್ತಮವಾಗಿ ಬೆಳೆದಿತ್ತು. ಆದರೆ, ಕಳೆದ ನಾಲ್ಕೈದು ದಿನಗಳ ಹಿಂದೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ಔಷಧಿ ಸಿಂಪಡಣೆ ಮಾಡಿದ್ದ. ಆದರೆ ಔಷಧಿ ಸಿಂಪಡಣೆ ಮಾಡಿದ ನಂತರ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.

ದಾವಣಗೆರೆ : ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡು ಗ್ರಾಮದ ರೈತನೊಬ್ಬ ತನ್ನ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಇದೀಗ ಈರುಳ್ಳಿ ಬೆಳೆ ನೆಲ ಕಚ್ಚಿದ್ದು, ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಬಿಗ್ ಶಾಕ್ ಎದುರಾಗಿದೆ.  ಇನ್ನೆರಡು ವಾರ ಕಳೆದಿದ್ದರೆ ಈರುಳ್ಳಿ ಕಟಾವು ಮಾಡಿ ಮಾರ್ಕೆಟ್ ಗೆ ತೆಗೆದುಕೊಂಡು ಹೋಗಬೇಕಿದ್ದ ರೈತನಿಗೆ ಇದೀಗ ಶಾಕ್ ಕಾದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. 

ಬೀರಲಿಂಗೇಶ್ ಅವರಿಗೆ ಬಿಸಿಲಿಗೆ ಈ ರೀತಿ ಆಗಿರಬಹುದು ಎಂದುಕೊಂಡಿದ್ದ ತದ ನಂತರ ಮಳೆ ಆದರೂ ಬೆಳೆ ಚೇತರಿಸಿಕೊಳ್ಳದೇ ಇರುವುದನ್ನ ನೋಡಿ ಸಂಶಯ ಬಂದು ಈರುಳ್ಳಿ ಸಸಿ ಕಿತ್ತು ನೋಡಿದಾಗ, ಆಘಾತವಾಗಿದೆ. ಏಕೆಂದರೆ ಈರುಳ್ಳಿ ಕೊಳೆಯಲು ಆರಂಭವಾಗಿದೆ. ಔಷಧಿ ಸಿಂಪಡಣೆಯಿಂದ ಎಡವಟ್ಟು ಆಗಿದೆ ಎಂದು ಆತ ತಕ್ಷಣ ಔಷಧೀ ಖರೀದಿ ಮಾಡಿದ ಅಂಗಡಿಯವನ ಬಳಿ ಹೋಗಿದ್ದಾನೆ. ಅಂಗಡಿಯವನು ಇದಕ್ಕೂ ನನಗೆ ಸಂಬಂಧ ಇಲ್ಲ, ನೇರವಾಗಿ ಕಂಪನಿಯವರ ಜೊತೆ ಮಾತನಾಡಿ ಎಂದು ಕಂಪನಿಯವರ ಕಡೆ ಕೈ ತೋರಿಸಿದ್ದಾನೆ.

ಮೂರು ತಿಂಗಳ ಹಿಂದೆ ರೈತ ಈರುಳ್ಳಿ ನಾಟಿ ಮಾಡಿದ್ದು, ಅಲ್ಲಿಂದ ಇಲ್ಲಿಯವರೆಗೂ 1 ಲಕ್ಷದ ವರೆಗೆ ವೆಚ್ಚವಾಗಿದೆ. ಅಲ್ಲದೆ ಇನ್ನೆರಡು ವಾರದಲ್ಲಿ ಈರುಳ್ಳಿ ಕಟಾವು ಮಾಡಿ ಮಾರಾಟ ಮಾಡಿದ್ದರೇ 8 ರಿಂದ 10 ಲಕ್ಷ ಆದಾಯ ಬರುತ್ತಿತ್ತು. ಆದರೆ, ಇದೀಗ ನಮಗೆ ಸಾಕಷ್ಟು ತೊಂದರೆ ಆಗಿದೆ. ಇದನ್ನೇ ನಂಬಿ ಸಾಲ ಮಾಡಿದ್ದು, ಈಗ ಅದನ್ನು ತಿರಿಸುವುದು ಹೇಗೆ ಎಂಬ ಆತಂಕ ವ್ಯಕ್ತಪಡಿಸಿದ್ದಾನೆ. ಖಾಸಗಿ ಕಂಪನಿಯ ಔಷಧಿ ಸಿಂಪಡಿಸಿದ ಪರಿಣಾಮ ಈರುಳ್ಳಿ ಬೆಳೆ ಹಾಳಾಗಿದ್ದು, ಕಂಪನಿಯವರು ಸೂಕ್ತ ಪರಿಹಾರ ನೀಡುವಂತೆ ರೈತ ಬೀರಲಿಂಗೇಶ್ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಸಾಲಸೋಲ ಮಾಡಿ ಬೆಳೆದ ಬೆಳೆ ಇದೀಗ ಹಾಳಾಗಿದ್ದು ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಈ ರೈತನ ಕುಟುಂಬಕ್ಕೆ ಆಗಿರುವ ತೊಂದರೆಗೆ ಸ್ಪಂಧಿಸುವ ಮೂಲಕ ನೊಂದ ರೈತ ಕುಟುಂಬದ ನೆರವಿಗೆ ಬರುತ್ತಾರಾ ಎಂಬುದನ್ನು ಕಾದು ನೋಡ ಬೇಕಿದೆ.