ವೈರಲ್

ಬೆಳೆಗೆ ದೃಷ್ಟಿ ಬೀಳಬಾರದೆಂದು ಮಾಡೆಲ್‌ಗಳ ಪೋಟೋ ಹಾಕಿದ ರೈತ

ಇಲ್ಲೊಬ್ಬ ರೈತ ಹುಲುಸಾಗಿ ಬೆಳೆದ ಬಾಳೆ ಬೆಳೆಗೆ ಯಾರ ಕೆಟ್ಟ ಕಣ್ಣು ಕೂಡ ಬೀಳ ಬಾರದೆಂದು ಜಮೀನಿನ ಬೇಲಿಗಳಿಗೆ ಮಾಡೆಲ್‌ಗಳ ಫೋಟೋವನ್ನ ನೇತು ಹಾಕಿದ್ದಾನೆ.

ಮೈಸೂರು : ಬೆಳೆಗಳಿಗೆ ದೃಷ್ಟಿ ಬೀಳಬಾರದೆಂದು ಮನೆಯಲ್ಲಿ ಬಳಸಿ ತೂತು ಬಿದ್ದ ಮಣ್ಣಿನ ಮಡಿಕೆಗೆ ಸುಣ್ಣ ಬಳಿದು, ಮೂಗು, ವಿಕಾರ ಕಣ್ಣುಗಳನ್ನು ತಿದ್ದಿ ದೃಷ್ಟಿ ಬೊಂಬೆ ಮಾಡಿ ರೈತರು ತಮ್ಮ ಹೊಲದಲ್ಲಿಯೇ ನೇತುಹಾಕೋದನ್ನ ನೋಡಿರ್ತೀವಿ. ಆದ್ರೆ ಈಗಿನ ರೈತರು ಒಂದು ಹೆಜ್ಜೆ ಮುಂದೆ ಹೋಗಿ ಯೋಚನೆ ಮಾಡ್ತಾರೆ. ಹೌದು ಇಲ್ಲೊಬ್ಬ ರೈತ ಹುಲುಸಾಗಿ ಬೆಳೆದ ಬಾಳೆ ಬೆಳೆಗೆ ಯಾರ ಕೆಟ್ಟ ಕಣ್ಣು ಕೂಡ ಬೀಳ ಬಾರದೆಂದು ಜಮೀನಿನ ಬೇಲಿಗಳಿಗೆ ಮಾಡೆಲ್‌ಗಳ ಫೋಟೋವನ್ನ ನೇತು ಹಾಕಿದ್ದಾನೆ.

ನಂಜನಗೂಡಿನಿಂದ ಮಡಹಳ್ಳಿ ಹಾಗೂ ತಗಡೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಜಮೀನಿನಲ್ಲಿ ಕಕ್ಕರಹಟ್ಟಿ ಗ್ರಾಮದ ರೈತ ಸೋಮೇಶ್‌ ಎಂಬಾತ ತನ್ನ ಜಮೀನಿಗೆ ಅರೆಬೆತ್ತಲೆಯಾಗಿ ಇರುವ ಮಾಡೆಲ್ ಗಳ ಫೋಟೋಗಳನ್ನ ಅಳವಡಿಸಿದ್ದಾನೆ. ನಾಲ್ಕು ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಸೊಗಸಾಗಿ ಮೂಡಿ ಬಂದಿದೆ. ಬೆಳೆ ಮೇಲೆ ಯಾರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆ ಅಳವಡಿಕೆ ಮಾಡಿದ್ದಾರೆ. ತನ್ನ ಜಮೀನಿನ ಸುತ್ತು ಸುಮಾರು 10 ಸ್ಥಳಗಳಲ್ಲಿ ಮಾಡೆಲ್ ಚಿತ್ರಗಳನ್ನ ಅಳವಡಿಸಿದ್ದಾನೆ.