ಜೋತಿಷ್ಯ

ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಬಗ್ಗೆ ನಿಮಗೆ ಗೊತ್ತಿದೆಯಾ..?

ಶ್ರಾವಣ ಮಾಸದ 2ನೇ ಶುಕ್ರವಾರ ಬರುವ ಹಬ್ಬವೇ ವರಮಹಾಲಕ್ಷ್ಮಿ ಹಬ್ಬ. ಎಲ್ಲಾ ಮುತ್ತೈದೆಯರು ಶ್ರದ್ಧೆ-ಭಕ್ತಿಯಿಂದ ಆಚರಿಸುವ ಹಬ್ಬ ಇದಾಗಿದ್ದು, ಇದನ್ನು ಹೆಣ್ಣು ಮಕ್ಕಳ ಶ್ರೇಷ್ಠ ಹಬ್ಬ ಅಂತಲೂ ಕರೆಯಲಾಗುತ್ತೆ. ಈ ಪವಿತ್ರ ಹಬ್ಬದ ಹಿಂದೆ ಚಾರುಮತಿ ಪುರಾಣ ಎಂಬ ಇತಿಹಾಸ ಇದೆ.

ಚಾರುಮತಿ ಎಂಬ ಸ್ತ್ರೀ ತನ್ನ ಅತ್ತೆ-ಮಾವನ ನಿಸ್ವಾರ್ಥ ಸೇವೆ ಮಾಡಿ, ಸಾಕ್ಷಾತ್ ವರಮಹಾಲಕ್ಷ್ಮಿಯನ್ನೇ ಒಲಿಸಿಕೊಳ್ಳುತ್ತಾಳೆ. ಶ್ರಾವಣ ಮಾಸದ ಹುಣ್ಣಿಮೆಗೂ ಮುನ್ನ ಬರುವ ಮೊದಲ ಶುಕ್ರವಾರ ನನ್ನನ್ನು ಆರಾಧಿಸು. ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎಂದು ಸಾಕ್ಷಾತ್ ಲಕ್ಷ್ಮಿಯೇ ಚಾರುಮತಿಗೆ ಹೇಳಿದ್ದು, ಲಕ್ಷ್ಮಿಯ ಆಜ್ಞೆಯಂತೆ ಚಾರುಮತಿ ಶ್ರಾವಣ ಮಾಸದ ಮೊದಲ ಶುಕ್ರವಾರ ಲಕ್ಷ್ಮಿದೇವಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಂಡ ಇತಿಹಾಸವಿದು ಎನ್ನಲಾಗಿದೆ.


ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತರಿಸಿದ ದೇವತೆ ಎಂಬ ಕಥೆಯಿದೆ. ಅಂದರೆ ಅಮೃತಕ್ಕಾಗಿ ರಾಕ್ಷಸರು ಹಾಗೂ ದೇವತೆಗಳು ವಾಸುಕಿಯ ಸಹಾಯದಿಂದ, ಮಂದಾರ ಪರ್ವತ ಕಡೆಯುತ್ತಿದ್ದಾಗ ಕ್ಷೀರಸಾಗರದಿಂದ ಉದ್ಭವಿಸಿದವಳೇ ದೇವಿ ಲಕ್ಷ್ಮಿ. ಹೀಗಾಗಿ ಲಕ್ಷ್ಮಿಯನ್ನು ಇಷ್ಟಾರ್ಥಗಳನ್ನು ಪೂರೈಸುವ ದೇವತೆ ಎನ್ನಲಾಗುತ್ತೆ. ಶ್ರದ್ಧೆ ಭಕ್ತಿಯಿಂದ ಲಕ್ಷ್ಮಿಯನ್ನು ಆರಾಧಿಸಿದರೆ ಸಕಲ ಇಷ್ಟಾರ್ಥ ಪ್ರಾಪ್ತಿಯಾಗುತ್ತೆ ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ಪ್ರತೀವರ್ಷ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು, ಮುತ್ತೈದೆಯರು ಬಹಳ ಕಟ್ಟು ನಿಟ್ಟಿನಿಂದ ಈ ಹಬ್ಬವನ್ನು ಆಚರಿಸುತ್ತಾರೆ.