ಸ್ಪೆಷಲ್ ಸ್ಟೋರಿ

ಮಲೆನಾಡಿನಲ್ಲಿ ಕಳಪೆ ಅಡಿಕೆ ದಂಧೆ..! ಮಲೆನಾಡಿನ ಹೆಮ್ಮೆಯ ವಿಶಿಷ್ಟ ಸಾಂಪ್ರದಾಯಿಕ ತಳಿ ಅಡಿಕೆ ಬೆಲೆಗೆ ಆಪತ್ತು.?

ಭೂತಾನ್‌, ಶ್ರೀಲಂಕಾ, ಮ್ಯಾನ್ಮಾರ್‌ ದೇಶಗಳು ಸೇರಿದಂತೆ, ಭಾರತದ ಮೇಘಾಲಯ, ಅಸ್ಸಾಂ ರಾಜ್ಯದ ಅಡಿಕೆಯನ್ನು ತೀರ್ಥಹಳ್ಳಿಗೆ ಆಮದು ಮಾಡಿಕೊಂಡು ದೇಶವಾರ ಅಡಿಕೆ ಜತೆಗೆ ಸೇರಿಸಿ ಸಾಂಪ್ರದಾಯಿಕ ಅಡಿಕೆ ಹೆಸರಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಈ ದಂಧೆ ಹಿಂದೆ ಪ್ರಭಾವಿಗಳಿದ್ದು ಮಾರುಕಟ್ಟೆ ವ್ಯವಸ್ಥೆ ಹಾಳುಮಾಡುತ್ತಿದ್ದಾರೆ.

ತೀರ್ಥಹಳ್ಳಿ: ಅಡಿಕೆ ಎಂದರೆ ನೆನಪಾಗುವುದೇ ಮಲೆನಾಡು. ಆದರೆ ಅಡಿಕೆ ಮಾರಾಟದಲ್ಲಿ ಅಕ್ರಮ ವಹಿವಾಟು ಹಾಗೂ ಉತ್ಕೃಷ್ಟ ದರ್ಜೆಯ ದೇಶವಾರು ಅಡಕೆಯ ಜತೆಗೆ ಕಳಪೆ ಅಡಕೆ ಸೇರಿಸಿ ಮಾರಾಟ ಮಾಡುವ ದಂಧೆ ನೆಡೆಯುತ್ತಿರುವ ಪರಿಣಾಮ, ಮಲೆನಾಡಿನ ಹೆಮ್ಮೆಯ ವಿಶಿಷ್ಟ ಸಾಂಪ್ರದಾಯಿಕ ತಳಿ ಅಡಿಕೆ ಬೆಲೆಗೆ ಆಪತ್ತು ತಂದಿದೆ, ಇದರಿಂದ ಸಾಂಪ್ರದಾಯಿಕ ಅಡಕೆ ಬೆಳೆಯುವ ರೈತರಿಗೆ ಚಿಂತೆ ಶುರುವಾಗಿದೆ.

ಭಾರತದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ಮೂಲ ಕೇಂದ್ರವಾಗಿರುವ ತೀರ್ಥಹಳ್ಳಿ ಭಾಗದಲ್ಲೇ ಕಳಪೆ ದರ್ಜೆ ಅಡಕೆ ವಹಿವಾಟಿನ ದಂಧೆ ಹೆಜ್ಜಾಗುತ್ತಿದೆ. ಉತ್ತರ ಭಾರತದ ಪ್ರಮುಖ ರಾಜ್ಯಗಳ ಜತೆ ನೇರ ವಹಿವಾಟು ಹೊಂದಿರುವ ದಂಧೆಕೋರರು ಸ್ಥಳೀಯ ವಿಶಿಷ್ಟ ಅಡಿಕೆಗಿರುವ ಧಾರಣೆ ಕುಸಿಯುವಂತೆ ಮಾಡಿದ್ದಾರೆ. ಭೂತಾನ್‌, ಶ್ರೀಲಂಕಾ, ಮ್ಯಾನ್ಮಾರ್‌ ದೇಶಗಳು ಸೇರಿದಂತೆ, ಭಾರತದ ಮೇಘಾಲಯ, ಅಸ್ಸಾಂ ರಾಜ್ಯದ ಅಡಿಕೆಯನ್ನು ತೀರ್ಥಹಳ್ಳಿಗೆ ಆಮದು ಮಾಡಿಕೊಂಡು ದೇಶವಾರ ಅಡಿಕೆ ಜತೆಗೆ ಸೇರಿಸಿ ಸಾಂಪ್ರದಾಯಿಕ ಅಡಿಕೆ ಹೆಸರಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಈ ದಂಧೆ ಹಿಂದೆ ಪ್ರಭಾವಿಗಳಿದ್ದು ಮಾರುಕಟ್ಟೆ ವ್ಯವಸ್ಥೆ ಹಾಳುಮಾಡುತ್ತಿದ್ದಾರೆ.

ಕೊರೊನಾ ವಿಪತ್ತು ನಂತರ ಅಡಿಕೆ ಕಳಪೆ ವಹಿವಾಟು ಇನ್ನಷ್ಟು ಬಿರುಸಾಗಿದ್ದು, ಉತ್ತರ ಭಾರತದ ವ್ಯಾಪಾರಿಗಳ ಜತೆ ನೇರ ಸಂಪರ್ಕ ಸಾಧಿಸಿ ವ್ಯವಹರಿಸಲಾಗುತ್ತಿದೆ. ರಾತ್ರಿ, ಬೆಳಗಿನ ಜಾವ ತೀರ್ಥಹಳ್ಳಿ ಭಾಗದಿಂದ ಸಾಗರ, ಹುಬ್ಬಳ್ಳಿ, ಬೆಳಗಾವಿ ಮಾರ್ಗದಲ್ಲಿ ಕಲಬೆರೆಕೆ ಅಡಿಕೆಯನ್ನು ಲಾರಿಗಳಲ್ಲಿ ಸಾಗಣೆ ಮಾಡಲಾಗುತ್ತಿದೆ. ತೀರ್ಥಹಳ್ಳಿ, ಕೋಣಂದೂರು, ಬೆಜ್ಜವಳ್ಳಿ, ರಿಪ್ಪನ್‌ಪೇಟೆ ಭಾಗದಲ್ಲಿ ಕಳಪೆ ಅಡಿಕೆ ವಹಿವಾಟು ಭರ್ಜರಿಯಾಗಿದ್ದು ರೈತರಿಗೆ ಮೋಸವಾಗುತ್ತಿದೆ.
ಅಡಿಕೆ ಕಳಪೆ ದಂಧೆಯ ವಹಿವಾಟು ಸಾವಿರಾರು ಕೋಟಿಗಳ ಮೊತ್ತದಲ್ಲಿದ್ದು, ಸರ್ಕಾರಕ್ಕೂ ಲೆಕ್ಕ ಸಿಗದಂತಾಗಿದೆ. ಪಟ್ಟಣದ ಎಪಿಎಂಸಿ ಹತ್ತಿರ 4 ವರ್ಷದ ಹಿಂದೆ ಕಳಪೆ ಅಡಕೆ ಸಿದ್ಧಪಡಿಸುತ್ತಿದ್ದ ಕೃತ್ಯ ಬಯಲಾದ ನಂತರವೂ ವಹಿವಾಟು ನಿಂತಿಲ್ಲ. ಮತ್ತಷ್ಟು ಗಟ್ಟಿಯಾಗಿರುವ ದಂಧೆಗೆ ಪ್ರಭಾವಿಗಳ ಶ್ರೀರಕ್ಷೆ ದೊರಕಿದೆ. ಸರಕಾರ, ಆಡಳಿತ ಅಸಹಾಯಕವಾದಂತಿದೆ  ಎಂದು ಅಡಿಕೆ ಬೆಳೆಗಾರರಿಂದ ಆರೋಪ ಕೇಳಿ ಬರುತ್ತಿದೆ.