ದೇಶ

ತಿರುಪತಿ ಲಡ್ಡು ಪ್ರಸಾದ ವಿವಾದ: ಪೇಜಾವರ ಶ್ರೀಗಳಿಂದ ತೀವ್ರ ಆಕ್ಷೇಪ

ಈ ಘಟನೆಯಿಂದ ಮನಸ್ಸಿಗೆ ಬಹಳ ಬೇಸರ ಉಂಟಾಗಿದೆ, ಪವಿತ್ರ ಪ್ರಸಾದ ತಯಾರಿಕೆಗೆ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿದ್ದಾರೆ ಎಂದರೆ ಇದು ಹಿಂದೂ ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ, ಇದು ದೇವರಿಗೆ ಬಗೆದಿರುವ ಅಪಚಾರ, ಸ್ವತಃ ಅಲ್ಲಿನ ಸರಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಶುದ್ಧ ಹಸುವಿನ ತುಪ್ಪ ಬಳಸುವ ಬದಲು ಪ್ರಾಣಿಜನ್ಯ ಕೊಬ್ಬು ಬಳಸಿರುವುದು ಹಿಂದೂ ಧರ್ಮಕ್ಕೆ, ದೇವರಿಗೆ ಎಸಗಿರುವ ಅಪಚಾರ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಈ ಘಟನೆಯಿಂದ ಮನಸ್ಸಿಗೆ ಬಹಳ ಬೇಸರ ಉಂಟಾಗಿದೆ, ಪವಿತ್ರ ಪ್ರಸಾದ ತಯಾರಿಕೆಗೆ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿದ್ದಾರೆ ಎಂದರೆ ಇದು ಹಿಂದೂ ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ, ಇದು ದೇವರಿಗೆ ಬಗೆದಿರುವ ಅಪಚಾರ, ಸ್ವತಃ ಅಲ್ಲಿನ ಸರಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಿರುಪತಿಯ ಶ್ರೀನಿವಾಸ ದೇವರು, ಗೋವಿನ ರಕ್ಷಣೆಗೆ ಅವತರಿಸಿದವ. ಅಲ್ಲಿ ಹುತ್ತಕ್ಕೆ ಹಸುವೊಂದು ಹಾಲು ಎರೆಯುತ್ತಿತ್ತಂತೆ, ಮಾಲಕ ಹಸುವನ್ನು ಹೊಡೆಯಲು ಬಂದನಂತೆ, ಆಗ ಹುತ್ತದಿಂದ ಮೇಲೆ ಬಂದ ಶ್ರೀನಿವಾಸ ಮಾಲಕನ ಏಟಿಗೆ ಮೈಯೊಡ್ಡಿ, ಹಸುವನ್ನು ರಕ್ಷಿಸಿದ ಅನ್ನುವುದು ಅಲ್ಲಿನ ಐತಿಹ್ಯ. ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದಾರೆ ಎಂದರೆ ಅದೊಂದು ಘೋರ ಅಪರಾಧವಾಗಿದೆ ಎಂದು ಶ್ರೀಗಳು ಹೇಳಿದ್ದಾರೆ.

ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಸರ್ಕಾರದ ಹಿಡಿತದಲ್ಲಿ ಇರಬಾರದು, ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜದ ಕೈಯಲ್ಲಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೇಳಿದೆ. ಆದ್ದರಿಂದ ತಡ ಮಾಡದೇ ದೇವಾಲಯಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಬೇಕು, ಹಿಂದೂಗಳ ಸಂಸ್ಥೆಗೆ ತಿರುಪತಿ ದೇವಾಲಯದ ಆಡಳಿತ ನೀಡಬೇಕು, ಇದು ಸರ್ಕಾರದ ಕರ್ತವ್ಯ ಎಂದು ಶ್ರೀಗಳು ಹೇಳಿದ್ದಾರೆ.