ಕರ್ನಾಟಕ

ತುಂಗಭದ್ರಾ ಜಲಾಶಯ ಭರ್ತಿ; 10 ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು.. ಸಂತಸದಲ್ಲಿ ರೈತರು..!

ಕಳೆದ 15 ದಿನಗಳಲ್ಲಿ ನಿರಂತರವಾಗಿ ಸರಾಸರಿ 30 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದೆ. ಇದರಿಂದ 15 ದಿನಗಳಲ್ಲೇ ಬರೋಬ್ಬರಿ 30 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದ್ದು, ಜೀವ ಜಲದಿಂದ ಅಣೆಕಟ್ಟು ತುಂಬಿ ತುಳುಕುತ್ತಿದೆ. ರೈತರ ಆತಂಕ ದೂರವಾಗಿದೆ.

ಹೊಸಪೇಟೆ : ತುಂಗಭದ್ರಾ ಜಲಾಶಯ ತುಂಬಿದೆ,  ಟಿಬಿ ಬೋರ್ಡ್ ಅಧಿಕಾರಿಗಳು ಮಂಗಳವಾರವೇ ಈ ಹಿನ್ನೆಲೆಯಲ್ಲಿ ಬುಧವಾರ 10 ಕ್ರಸ್ಟ್ ಗೇಟ್‌ಗಳ ಮೂಲಕ ಮತ್ತೊಮ್ಮೆ ನದಿಗೆ ನೀರು ಹರಿಸಲಾಗುತ್ತದೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದರು. ಸೆಪ್ಟೆಂಬರ್‌ 4ರಂದು ಬೆಳಗ್ಗೆ 9 ಗಂಟೆ ನಂತರ 5 ರಿಂದ 50 ಸಾವಿರ ಕ್ಯುಸೆಕ್‌ವರೆಗೆ ನದಿಗೆ ನೀರು ಹರಿಸಲಾಗುವುದು. ನದಿ ಪಾತ್ರದಲ್ಲಿಎಚ್ಚರಿಕೆ ವಹಿಸಬೇಕು ಎಂದು ತುಂಗಭದ್ರ ಮಂಡಳಿ ಸಂದೇಶ ನೀಡಿತ್ತು. ಇದೀಗ ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಣೆಕಟ್ಟಿನಿಂದ ನದಿಗೆ ನೀರು ಹರಿಸಲಾರಂಭಿಸಿದ್ದಾರೆ.

19ನೇ ಕ್ರಸ್ಟ್‌ ಗೇಟ್ ಚೈನ್ ಕಟ್ ಆದ ಬಳಿಕ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿತ್ತು. ಇದರಿಂದ ರೈತರು ಚಿಂತೆಗೀಡಾಗಿದ್ದರು. ಆದರೆ, ಮಲೆನಾಡು ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ಭದ್ರಾ, ತುಂಗಾ ಮತ್ತು ವರದ ನದಿಗಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಟಿಬಿ ಡ್ಯಾಂಗೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದುರಸ್ಥಿ ಬಳಿಕವೂ ಜಲಾಶಯ ಭರ್ತಿಯಾಗುತ್ತಿದೆ. ಸದ್ಯ 105 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 101 ಟಿಎಂಸಿ ನೀರು ಸಂಗ್ರಹವಾಗಿದೆ.

19ನೇ ಕ್ರಸ್ಟ್ ಗೇಟ್‌ಗೆ ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್‌ ಅಳವಡಿಕೆ ಮಾಡುವ ಮೂಲಕ ನೀರು ಹೊರಗಡೆ ಹೋಗುವುದನ್ನು ಎನ್‌ ಕನ್ನಯ್ಯ ನಾಯ್ಡು ನೇತೃತ್ವದ ತಂಡ ತಡೆದಿತ್ತು. ಬಳಿಕ 90 ಟಿಎಂಸಿ ನೀರು ಸಂಗ್ರಹವಾದರೆ ಸಾಕು ಎಂಬ ಮನಸ್ಥಿತಿಯಲ್ಲಿ ಇಲ್ಲಿನ ಜಲಾನಯನ ಪ್ರದೇಶದ ರೈತರು ಇದ್ದರು.

ಆದರೆ, ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ನಿರೀಕ್ಷೆ ಮೀರಿ ನೀರು ಹರಿದು ಬಂದಿದೆ. ಹೀಗಾಗಿ ಕಳೆದ 15 ದಿನಗಳಲ್ಲಿ ನಿರಂತರವಾಗಿ ಸರಾಸರಿ 30 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದೆ. ಇದರಿಂದ 15 ದಿನಗಳಲ್ಲೇ ಬರೋಬ್ಬರಿ 30 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದ್ದು, ಜೀವ ಜಲದಿಂದ ಅಣೆಕಟ್ಟು ತುಂಬಿ ತುಳುಕುತ್ತಿದೆ. ರೈತರ ಆತಂಕ ದೂರವಾಗಿದೆ.

ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳು, ನೆರೆಯ ಆಂಧ್ರ ಪ್ರದೇಶದ ಅನಂತಪುರ, ಕಡಪ, ಕರ್ನೂಲ್ ಜಿಲ್ಲೆಗಳು ಹಾಗೂ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಗಳ ಜೀವನಾಡಿ ಭರ್ತಿಯಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಎರಡನೇ ಬೆಳೆಗೂ ನೀರು ಸಿಗುವ ಪೂರ್ಣ ವಿಶ್ವಾಸದಲ್ಲಿದ್ದಾರೆ.