ಮಂಡ್ಯ : ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾಗಿರುವ ದುರ್ಘಟನೆಯೊಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದ ಶ್ರೀ ಮದ್ದೂರಮ್ಮನ ಕೆರೆಯಲ್ಲಿ ನಡೆದಿದೆ. ಮೃತ ಬಾಲಕರಾದ ಮುತ್ತುರಾಜು (14) ಎಸ್ಎಸ್ಎಲ್ಸಿ ಓದುತ್ತಿದ್ದನು. ಹಾಗೂ ರಂಜು (17) ಐಟಿಐ ಮಾಡಿದ್ದನು. ಮಧ್ಯಾಹ್ನ ಸ್ನೇಹಿತರೆಲ್ಲ ಸೇರಿಕೊಂಡು ಕೆರೆಗೆ ಈಜಲು ಹೋಗಿದ್ದಾರೆ. ಕೆಲಕಾಲ ಆಟವಾಡಿದ್ದು, ಬಳಿಕ ಕೆರೆ ನೀರಿನ ಆಳಕ್ಕೆ ಹೋದ ಪರಿಣಾಮ ಮೇಲೇಳಲಾಗದೇ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಮೃತದೇಹಗಳನ್ನು ಶೋಧ ಕಾರ್ಯ ನಡೆಸಿ ಮೇಲೆತ್ತಿದ್ದಾರೆ. ಬೆಸಗರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.