ಬ್ರಿಸ್ಬೇನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಸಜ್ಜಾಗಿವೆ. ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.
ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಲಿದೆ. ಹಾಗಾಗಿ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಿರುವ ಈ ಪಂದ್ಯಕ್ಕಾಗಿ ಈಗಾಗಲೇ ಆಸ್ಟ್ರೇಲಿಯಾ ತಂಡ ಪ್ಲೇಯಿಂಗ್ ಇಲೆವನ್ ಪ್ರಕಟಿಸಿದೆ. ಇನ್ನು ಈ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ 2 ಬದಲಾವಣೆ ನಿರೀಕ್ಷಿಸಲಾಗಿದೆ.
ಅಡಿಲೇಡ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಅದೇ ಸ್ಥಾನದಲ್ಲಿ ಮುಂದುವರೆಯುವ ನಿರೀಕ್ಷೆ ಇದೆ. ಉಳಿದಂತೆ ಆರ್ ಅಶ್ವಿನ್ ಬದಲು ವಾಷಿಂಗ್ಟನ್ ಸುಂದರ್ ಹಾಗೂ ವೇಗದ ಬೌಲಿಂಗ್ ವಿಭಾಗದಲ್ಲಿ ಹರ್ಷಿತ್ ರಾಣಾ ಅವರ ಸ್ಥಾನದಲ್ಲಿ ಆಕಾಶ್ ದೀಪ್ಗೆ ಅವಕಾಶ ಸಿಗಬಹುದು.
ಪರ್ತ್ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ 295 ರನ್ಗಳ ಭರ್ಜರಿ ಗೆಲುವು ಪಡೆದಿದ್ದ ಭಾರತ ತಂಡ, ಟೆಸ್ಟ್ ಸರಣಿಯಲ್ಲಿ ಶುಭಾರಂಭ ಕಂಡಿತ್ತು. ಆದರೆ, ಅಡಿಲೇಡ್ನಲ್ಲಿ ನಡೆದಿದ್ದ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಟೀಮ್ ಇಂಡಿಯಾ 10 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತ ತಂಡ ಬ್ರಿಸ್ಬೇನ್ ನಲ್ಲಿ ಗೆಲ್ಲಲೇಬೇಕಿದೆ. ಇನ್ನು ಕಳೆದ ಬಾರಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಬ್ರಿಸ್ಬೇನ್ ನಲ್ಲಿ 4 ವಿಕೆಟ್ ಅಂತರದಿಂದ ಗೆದ್ದು ಸರಣಿ ಜಯಿಸಿತ್ತು.
ಇನ್ನು ಆಸ್ಟ್ರೇಲಿಯಾ ತಂಡ ಪ್ಲೇಯಿಂಗ್ ಇಲೆವನ್ ಪ್ರಕಟಿಸಿದ್ದು, ಅದರಲ್ಲಿ ಒಂದು ಬದಲಾವಣೆ ಮಾಡಿದೆ. ಗಾಯದ ಕಾರಣ ಕಳೆದ ಪಂದ್ಯ ಆಡದಿದ್ದ ಜಾಶ್ ಹೇಝಲ್ವುಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಡಿಲೇಡ್ ನಲ್ಲಿ ಆಡಿದ್ದ ಸ್ಕಾಟ್ ಬೋಲೆಂಡ್ ರನ್ನು ತಂಡದಿಂದ ಕೈಬಿಡಲಾಗಿದೆ.