ನ್ಯೂಯಾರ್ಕ್: ಅಮೆರಿಕದ ಯುನೈಟೆಡ್ ಹೆಲ್ತ್‌ಕೇರ್ ಕಂಪನಿಯ ಸಿಇಒ ಬ್ರಿಯಾನ್ ಥಾಂಪ್ಸನ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಗುಂಡೇಟಿನಿಂದ ಥಾಂಪ್ಸನ್ ಮೃತಪಟ್ಟಿದಾರೆ.
ನ್ಯೂಯಾರ್ಕ್ ಹಿಲ್ಟನ್ ಮಿಡ್‌ಟೌನ್‌ನ ಹೊರಗೆ ಗುಂಡಿನ ದಾಳಿ ನಡೆದಿದೆ. ಹೆಲ್ತ್ ಇನ್ಸುರೆನ್ಸ್ ಕಂಪನಿಯೊಂದು ಆಯೋಜಿಸಿದ್ದ ಹೂಡಿಕೆದಾರರ ಸಮಾವೇಶದಲ್ಲಿ ಭಾಷಣ ಮಾಡಲು ಥಾಂಪ್ಸನ್ ಹೊರಡುವ ವೇಳೆ ಬೆಳಗ್ಗೆ 7 ಗಂಟೆಗೆ ಸರಿಯಾಗಿ ಗುಂಡಿನ ದಾಳಿ ನಡೆದಿದೆ. ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬ ಶಕ್ತ ಇದೆ. ಶಂಕಿತ ವ್ಯಕ್ತಿ ಗುಂಡಿನ ದಾಳಿ ನಡೆಸುವ ಮುನ್ನ ಘಟನಾ ಸ್ಥಳದಲ್ಲಿ ಹಲವು ಗಂಟೆ ಕಾದಿದ್ದ. ಬ್ರಿಯಾನ್ ಥಾಂಪ್ಸನ್ ರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ವ್ಯಕ್ತಿ ಹುಡ್ ಜಾಕೆಟ್ ಮತ್ತು ಮುಖವಾಡ ಧರಿಸಿದ್ದು,ಕೈಯಲ್ಲಿ ಗನ್ ಹಿಡಿದು ಥಾಂಪ್ಸನ್ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಮೊದಲ ಗುಂಡು ದೇಹದ ಹಿಂಭಾಗಕ್ಕೆ ತಾಗಿದ್ದು, ಎರಡನೇ ಗುಂಡು ನೇರವಾಗಿ ಕಾಲಿಗೆ ತಾಗಿದೆ. ಗುಂಡು ಹಾರಿಸಿದ ಕೂಡಲೇ ಆರೋಪಿ ಇ-ಬೈಕ್‌ನಲ್ಲಿ ಸೆಂಟ್ರಲ್ ಪಾರ್ಕ್ ಕಡೆಗೆ ಪಲಾಯನ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಥಾಂಪ್ಸನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗುಂಟೇಡಿನಿಂದ ಅವರು ಮೃತಪಟ್ಟಿದಾರೆ. ಶಂಕಿತನ ಕುರಿತು ಮಾಹಿತಿ ನೀಡಿ ಅವನ ಬಂಧನಕ್ಕೆ ಸಹಾಯ ಮಾಡುವವರಿಗೆ $10,000 ಬಹುಮಾನವನ್ನು ಘೋಷಿಸಲಾಗಿದೆ.