ದುಬೈ: ವೈಭವ್ ಸೂರ್ಯವಂಶಿ ಅರ್ಧಶತಕದ ನೆರವಿನಿಂದ ಭಾರತ ತಂಡ ಅಂಡರ್ 19 ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್ ಜನ ಸಾಧಿಸಿ ಫೈನಲ್ ತಲುಪಿದೆ.
ಟಾಸ್ ಗೆದ್ದು ಮೊದಲು ಗ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 46.2 ಓವರ್ ಗಳಲ್ಲಿ 173 ರನ್ ಗಳಿಸಿ ಆಲೌಟಾಗಿತ್ತು. 174 ರನ್ ಗುರಿ ಬೆನ್ನತ್ತಿದ ಭಾರತ ತಂಡ ಕೇವಲ 21.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ ಶ್ರೀಲಂಕಾ ವಿರುದ್ಧ ಜಯ ಗಳಿಸಿತು.
ಭಾರತ ತಂಡದ ಪರ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ 67 ರನ್ಗಳನ್ನು ಸಿಡಿಸಿದರು. ಅದರಲ್ಲಿಯೂ ಸೂರ್ಯವಂಶಿ ಅವರ 186ರ ಸ್ಟ್ರೈಕ್ ರೇಟ್ ಎಲ್ಲರ ಗಮನವನ್ನು ಸೆಳೆಯಿತು. ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಭರ್ಜರಿ ಆರಂಭ ತಂದುಕೊಟ್ಟರು. ವೈಭವ್ ಸೂರ್ಯವಂಶಿ ಎರಡನೇ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿದರು. ಅವರು ಎರಡನೇ ಓವರ್ನಲ್ಲಿ ಟೀಮ್ ಇಂಡಿಯಾದ ಸ್ಕೋರ್ ಅನ್ನು 40ಕ್ಕೆ ದಾಟಿಸಿದರು. ಸ್ಫೋಟಕ ಶೈಲಿಯಲ್ಲಿ ಬ್ಯಾಟ್ ಮಾಡಿದ ಸೂರ್ಯವಂಶಿ, ಕೇವಲ 24 ಎಸೆತಗಳಲ್ಲಿ 5 ಸಿಕ್ಸರ್ಗಳ ನೆರವಿನಿಂದ ಅರ್ಧಶತಕ ಪೂರೈಸಿದರು. ವೈಭವ್ ಆಯುಷ್ ಜೊತೆಗೂಡಿ 51 ಎಸೆತಗಳಲ್ಲಿ 91 ರನ್ಗಳ ಜೊತೆಯಾಟ ನಡೆಸಿ ಶ್ರೀಲಂಕಾವನ್ನು ಮಣಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು.
ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಲಿದೆ.