ಕ್ರೀಡೆಗಳು

ಸ್ಯಾಮ್ ಕಾನ್ಸ್ಟಾಸ್ ಜತೆ ಕಿರಿಕ್‌… ಬ್ಯಾನ್‌ ಆಗ್ತಾರಾ ಕಿಂಗ್‌ ಕೊಹ್ಲಿ..?

ಮೆಲ್ಬೋರ್ನ್‌ ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ನ ಮೊದಲ ದಿನ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ನಡುವೆ ಘರ್ಷಣೆ ನಡೆದಿದೆ.

ಮೆಲ್ಬೋರ್ನ್‌: ಮೆಲ್ಬೋರ್ನ್‌ ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ನ ಮೊದಲ ದಿನ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ನಡುವೆ ಘರ್ಷಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ಒಂದು ಪಂದ್ಯದ ನಿಷೇಧ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.

ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದೆ. ಈ ಪಂದ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 19 ವರ್ಷದ ಸ್ಯಾಮ್ ಕಾನ್ಸ್ಟಾಸ್ ಆಸಿಸ್‌ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಜಸ್ಪ್ರೀತ್‌ ಬುಮ್ರಾಗೆ ಆರಂಭದಲ್ಲೇ ಸಿಕ್ಸ್‌, ಫೋರ್‌ ಸಿಡಿಸಿ ದೊಡ್ಡ ಇನಿಂಗ್ಸ್‌ ಕಟ್ಟುವ ವಿಶ್ವಾಸ ಪ್ರದರ್ಶಿಸಿದ್ದರು.

ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡ್ತಿದ್ದರು. ಬುಮ್ರಾ ಬೌಲಿಂಗ್ ವೇಳೆ, ಇಬ್ಬರು ಮುಖಾಮುಖಿಯಾದರು. ಕೊಹ್ಲಿ ಬಾಲ್ ಕ್ಲಿಯರ್ ಮಾಡಿ ಕೀಪರ್ ಪಂತ್ ಕಡೆ ಬರ್ತಿದ್ದಾಗ ಸ್ಯಾಮ್ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೋಪಿಸಿಕೊಂಡ ಸ್ಯಾಮ್ ವಿರಾಟ್ ಕೊಹ್ಲಿಯನ್ನೇ ದಿಟ್ಟಿಸಿ ನೋಡಿದ್ದಾರೆ. ಆಗ ಕೊಹ್ಲಿ ಕೂಡ ಸ್ಯಾಮ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಕೊನೆಗೆ ಆಸಿಸ್ ಬ್ಯಾಟರ್ ಖವಾಜ್ ಹಾಗೂ ಅಂಪೈರ್ಗಳು ಬಂದು ಸಮಾಧಾನ ಮಾಡಿದ್ದಾರೆ.

ವಿರಾಟ್‌ ಕೊಹ್ಲಿ ಮತ್ತು ಸ್ಯಾಮ್‌ ನಡುವಿನ ಘರ್ಷಣೆಯಲ್ಲಿ ಮೇಲುನೋಟಕ್ಕೆ ಕೊಹ್ಲಿಯದ್ದೇ ತಪ್ಪು ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ರೂಲ್ಸ್ ಆರ್ಟಿಕಲ್ 2.1 ಪ್ರಕಾರ, ಯಾವುದೇ ಆಟಗಾರ ತನ್ನ ಸಹ ಆಟಗಾರ, ಎದುರಾಳಿ, ಆಟಗಾರನ ಸಹಾಯಕ್ಕೆ ಇರುವ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಮೈದಾನದಲ್ಲಿ ಯಾವುದೇ ಇತರೆ ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತಿಸುವಂತಿಲ್ಲ. ಅದರಲ್ಲೂ ದೈಹಿಕವಾಗಿ ಟಚ್ ಮಾಡುವ ಹಾಗಿಲ್ಲ. ಒಂದು ವೇಳೆ ದೈಹಿಕವಾಗಿ ಟಚ್ ಮಾಡಿದರೆ ಅಥವಾ ನಿಂದಿಸಿದರೆ ಶಿಕ್ಷೆ ವಿಧಿಸುವ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಕೊಹ್ಲಿಗೆ ಒಂದು ಪಂದ್ಯದ ನಿಷೇಧ ಶಿಕ್ಷೆ ಅಥವಾ ಪಂದ್ಯದ ಶುಲ್ಕ ಕಡಿತಗೊಳಿಸುವ ಸಾಧ್ಯತೆ ಇದೆ.