ನವದೆಹಲಿ: ಚೀನಾದ ಡಿಂಗ್ ಲಿರಿನ್ ರನ್ನು ಪರಾಭವಗೊಳಿಸಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡ ಭಾರತದ ಡಿ. ಗುಕೇಶ್‌ಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಗುರುವಾರ ಡಿಂಗ್ ಲಿರಿನ್ ಮತ್ತು ಗುಕೇಶ್ ನಡುವೆ 14 ನೇ ಪಂದ್ಯ ನಡೆದಿತ್ತು. ಈ ಪಂದ್ಯಕ್ಕೂ ಮುನ್ನ ತಲಾ 2 ಗೆಲುವು ಮತ್ತು 9 ಡ್ರಾಗಳೊಂದಿಗೆ ಇಬ್ಬರೂ ಆಟಗಾರರು 6.5-6.5 ಅಂಕ ಪಡೆದಿದ್ದರು. ಕೊನೆಯ ನಿರ್ಣಾಯಕ ಪಂದ್ಯದಲ್ಲಿ 7.5 – 6.5 ಅಂಕಗಳ ಅಂತರದಿಂದ ಸೋಲಿಸುವ ಮೂಲಕ 18 ವರ್ಷದ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಅತೀ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಜತೆಗೆ ವಿಶ್ವನಾಥನ್ ಆನಂದ್ ಅವರ ನಂತರ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಗುಕೇಶ್ ಪಾತ್ರರಾಗಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್ ಆದ ಡಿ. ಗುಕೇಶ್ ಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಶ್ವನಾಥನ್ ಆನಂದ್, ಲೆಜೆಂಡರಿ ಚೆಸ್ ಆಟಗಾರ್ತಿ ಜುಡಿಟ್ ಪೋಲ್ಕರ್ ಸೇರಿದಂತೆ ಗಣ್ಯರು ಅಭಿನಂದಿಸಿದಾರೆ.
ಗುಕೇಶ್ ತಮ್ಮ ಏಳನೇ ವಯಸ್ಸಿನಲ್ಲಿ ಶಾಲೆಯಲ್ಲಿ ಮೊದಲು ಚೆಸ್ ಬಗ್ಗೆ ತಿಳಿದುಕೊಂಡಿದ್ದರು. ನಂತರ ಆಟದ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡ ಇವರು ತಮ್ಮ ಮೊದಲ ಚೆಸ್ ಗುರು ಭಾಸ್ಕರ್ ವಿ. ಅವರ ಮಾರ್ಗದರ್ಶನದಲ್ಲಿ ತರಬೇತಿ ಪ್ರಾರಂಭಿಸಿದ್ದರು. ತಮ್ಮ 12ನೇ ವಯಸ್ಸಿನಲ್ಲಿಯೇ ಗುಕೇಶ್ ಭಾರತದ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರ ಹೊಮ್ಮಿದ್ದರು. 2017ರಲ್ಲಿ 34ನೇ ಕ್ಯಾಪೆಲ್ಲೆ-ಲಾ-ಗ್ರ್ಯಾಂಡೆ ಓಪನ್‌ನಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಪ್ರಶಸ್ತಿಯನ್ನು ಜಯಿಸಿದ್ದರು. ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಸ್ಪರ್ಧೆಯಾದ ಕ್ಯಾಂಡಿಡೇಟ್ ಟೂರ್ನಿಯನ್ನು ಜಯಿಸಿ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರು.