ಮುಂಬೈ: ಇತ್ತೀಚೆಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ 18 ನೇ ಆವೃತ್ತಿ ಮೆಗಾ ಹರಾಜಿನಲ್ಲಿ 182 ಆಟಗಾರರು ಹರಾಜಾಗಿದಾರೆ. ಆದರೆ ಈ ಹರಾಜಿನಲ್ಲಿ ಬಾಂಗ್ಲಾದೇಶದ ಯಾವೊಬ್ಬ ಆಟಗಾರನಿಗೂ ಫ್ರಾಂಚೈಸಿಗಳು ಬಿಡ್ ಮಾಡಲಿಲ್ಲ. ಬಾಂಗ್ಲಾ ಆಟಗಾರರು ಅನ್‌ಸೋಲ್ಡ್ ಆಗೋಕೆ ಕಾರಣ ಏನು ಅನ್ನೋ ಬಗ್ಗೆ ಕೆಲವು ಬಾಂಗ್ಲಾ ಆಟಗಾರರು ಅಳಲು ತೋಡಿಕೊಂಡಿದಾರೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಪದತ್ಯಾಗದ ಬಳಿಕ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಈಗ ಅಲ್ಪಸಂಖ್ಯಾತ ಹಿಂದೂಗಳನ್ನ ದಮನ ಮಾಡುವ ಕಾರ್ಯ ಸಹ ಅಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಟೆಸ್ಟ್ ಮತ್ತು ಟಿ20 ಸರಣಿಯನ್ನಾಡಲು ಬಾಂಗ್ಲಾದೇಶ ತಂಡ ಭಾರತಕ್ಕೆ ಬಂದಾಗ ಬಿಸಿಸಿಐ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವ ಫ್ರಾಂಚೈಸಿಯೂ ಬಾಂಗ್ಲಾ ಆಟಗಾರರನ್ನು ಖರೀದಿ ಮಾಡಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನು 2 ದಿನ ನಡೆದ ಮೆಗಾ ಹರಾಜಿನಲ್ಲಿ 62 ವಿದೇಶಿಯರ ಸಹಿತ ಒಟ್ಟು 182 ಆಟಗಾರರು ಬಿಕರಿಯಾದರು. ಎಲ್ಲ 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ಖರ್ಚು ಮಾಡಿದ್ದವು. ಇನ್ನು ಈ ಹರಾಜಿನಲ್ಲಿ ಬಾಂಗ್ಲಾದೇಶದ 12 ಆಟಗಾರರು ಕಾಣಿಸಿಕೊಂಡರೂ ಎಲ್ಲರೂ ಅನ್‌ಸೋಲ್ಡ್ ಆಗಿದ್ದರು. ಬಾರಿ ಅಫಘಾನಿಸ್ತಾನದ ಆಟಗಾರರರಿಗೆ ಉತ್ತಮ ಬೇಡಿಕೆ ಕಂಡು ಬಂತು. ಅನ್ಕ್ಯಾಪ್ಡ್ ಆಟಗಾರರು ಕೂಡ ಉತ್ತಮ ಬೆಲೆಗೆ ಬಿಕರಿಯಾದರು. ಆದರೆ ಬಾಂಗ್ಲಾ ಆಟಗಾರರು ಮಾತ್ರ ಖರೀದಿ ಆಗಲಿಲ್ಲ. ಹರಾಜಿನ ಸುತ್ತಿಗೆ ಬಂದರೂ ನಮ್ಮನ್ನು ಬೇಕೆಂತಲೇ ಖರೀದಿಸಿಲ್ಲ ಎಂದು ಕೆಲವು ಆಟಗಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಕಾರಣದಿಂದಲೇ ಪಾಕಿಸ್ತಾನದ ಯಾವೊಬ್ಬ ಆಟಗಾರನಿಗೂ ಐಪಿಎಲ್ ನಲ್ಲಿ ಆಡುವ ಅವಕಾಶ ನೀಡುತ್ತಿಲ್ಲ. ಆರಂಭಿಕ ಆವೃತ್ತಿಯಲ್ಲಿ ಪಾಕಿಸ್ತಾನ ಆಟಗಾರರು ಕೂಡ ಐಪಿಎಲ್ ಆಡಿದ್ದರು. ಮುಂಬೈ ದಾಳಿಯ ಬಳಿಕ ಪಾಕ್ ಆಟಗಾರರನ್ನು ಐಪಿಎಲ್ನಿಂದ ನಿಷೇಧಿಸಲಾಗಿತ್ತು. ಇದೀಗ ಹಿಂದೂಗಳ ಮೇಲೆ ದೌರ್ಜನ್ಯ ಎಸೆಗುತ್ತಿರುವ ಬಾಂಗ್ಲಾದೇಶಕ್ಕೂ ಪರೋಕ್ಷವಾಗಿ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಬಿಸಿ ಮುಟ್ಟಿಸಿದಂತಿದೆ.