ಜಮೀನು ಹಂಚಿಕೆ ವಿಚಾರವಾಗಿ ಅತ್ತಿಗೆ ಮೇಲೆಯೇ ಮೈದುನ ಹಾಗೂ ಮತ್ತಿತರರು ಹಲ್ಲೆ ನಡೆಸಿರುವ ಘಟನೆ, ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡಯಲ್ಕೂರು ಗ್ರಾಮದಲ್ಲಿ ನಡೆದಿದೆ. ಕುಡುಗೋಲುನಿಂದ ಅತ್ತಿಗೆಗೆ ಮನಬಂದಂತೆ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಲಕ್ಷ್ಮಿದೇವಮ್ಮ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಹಲ್ಲೆ ನಡೆಸಿದವರನ್ನು ಶಿವಕುಮಾರ್, ಶಿವಪ್ರಕಾಶ್, ಮಾಧವಿ ಹಾಗೂ ಗಿರಿಜಾ ಎನ್ನಲಾಗಿದೆ. ಕಳೆದ ಭಾನುವಾರ ಹಲ್ಲೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಜಮೋಹನ್, ನಾಗರಾಜು ಸೇರಿ 6 ಮಂದಿ ಅಣ್ಣ-ತಮ್ಮಂದಿರು ಜಮೀನು ಹಂಚಿಕೆ ಮಾಡಿಕೊಂಡಿರಲಿಲ್ಲ. ರಾಜಮೋಹನ್ ಎಂಬುವರ ಹೆಸರಿನಲ್ಲೇ ಜಮೀನು ಇತ್ತು. ರಾಜಮೋಹನ್ ಕಡೆಯಿಂದ ಜಮೀನು ಹಂಚಿಕೆ ಮಾಡಿಸಿಕೊಡಲಿಲ್ಲ. ಹೀಗಾಗಿ ಹಲ್ಲೆ ನಡೆದಿದೆ. ಈ ಬಗ್ಗೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಾಗಿದೆ.