ತುಮಕೂರು : ನಕಲಿ ಟ್ರೇಡಿಂಗ್ ಆ್ಯಪ್ ಬಳಸಿ ಮಹಿಳೆಯೊಬ್ಬಳಿಗೆ ಬರೋಬ್ಬರಿ12.29 ಲಕ್ಷ ರೂಪಾಯಿ ಪಂಗನಾಮ ಹಾಕಿದ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ. ಸಿ. ದಿವ್ಯಾ ಎಂಬುವರು ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ಹಣ ಕಳೆದುಕೊಂಡ ಮಹಿಳೆಯಾಗಿದ್ದಾರೆ.

ದಿವ್ಯಾ ಎಂಬುವರು ಪಾರ್ಟ್ ಟೈಮ್ ಕೆಲಸಕ್ಕಾಗಿನಲ್ಲಿ ನೌಕರಿ.ಕಾಮ್ (Naukri.com) ನಲ್ಲಿ ರೆಸ್ಯೂಮ್ ಅಪ್ ಲೋಡ್ ಮಾಡಿದ್ದಾರೆ. ಸೆ. 1ರಂದು ಅಪರಿಚಿತರು ಟೆಲಿಗ್ರಾಮ್ ನಲ್ಲಿ 'ಹಾದಿಯಾ' ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾರೆ. ಆಯಪ್ ಗಳಿಗೆ ರಿವೀವ್ ನೀಡಿದರೆ ಕಮಿಷನ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ನಂತರ '45055 ಪರ್ಥ್‌ಮಿಂಟ್' ಎಂಬ ಟೆಲಿಗ್ರಾಮ್ ಗ್ರೂಪ್ ಗೆ ಸೇರಿಸಿದ್ದಾರೆ. ಈ ವೇಳೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಮಹಿಳೆಗೆ ಆಮಿಷ ಒಡ್ಡಿದ್ದಾರೆ. ಹಣ ಹೂಡಿಕೆ ಮಾಡಲು ದಿವ್ಯಾ ಒಪ್ಪಿದಾಗ ಸೈಬರ್ ವಂಚಕರು ವಿವಿಧ ಬ್ಯಾಂಕ್ ಖಾತೆ, ಯುಪಿಐ ಐ.ಡಿಗಳನ್ನು ಕಳುಹಿಸಿದ್ದಾರೆ.
ಸೆ. 1ರಿಂದ ಅ. 18ರ ವರೆಗೆ ಹಂತ ಹಂತವಾಗಿ ಒಟ್ಟು ₹12, 84,071 ಹಣ ವರ್ಗಾಯಿಸಿದ್ದಾರೆ. ಇದರಲ್ಲಿ ಅವರ ಖಾತೆಗೆ ₹54,314 ವಾಪಸ್ ಹಾಕಿದ್ದಾರೆ. ಹೂಡಿಕೆ ಮಾಡಿದ ಹಣ ಹಿಂದಿರುಗಿಸುವಂತೆ ಗ್ರೂಪ್ ನಲ್ಲಿ ಮೆಸೇಜ್ ಮಾಡಿದ್ದು, ಯಾರೊಬ್ಬರು ಪ್ರತಿಕ್ರಿಯಿಸಿಲ್ಲ. ಇದರಿಂದ ಅನುಮಾನಗೊಂಡ ಮಹಿಳೆ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.