ಮಂಡ್ಯ: ಕೃಷಿ ಸಚಿವರ ಕ್ಷೇತ್ರದಲ್ಲೇ ಕೃಷಿಕರ ಬದುಕು ಮೂರಾಬಟ್ಟೆಯಾಗಿದೆ. ಸಚಿವರೇ ಈ ಗ್ರಾಮದ ರೈತರ ಹಾಲು ಖರೀದಿ ಮಾಡದಂತೆ ಹಾಲು ಉತ್ಪಾದಕರ ಸಂಘಕ್ಕೆ ಸೂಚನೆ ನೀಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಹಾಲನ್ನು ರಸ್ತೆಗೆ ಸುರಿದು ಸಚಿವ ಚಲುವರಾಯಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಲ್ಲೆಯ ನಾಗಮಂಗಲ ತಾಲೂಕಿನ ಕಾಡಂಕನಹಳ್ಳಿ ಗ್ರಾಮದಲ್ಲಿ ರಸ್ತೆಗೆ ಹಾಲು ಚೆಲ್ಲಿ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಟ್ಟೆ ಸೇರಬೇಕಿದ್ದ ನೂರಾರು ಲೀಟರ್ ಹಾಲು ಇದೀಗ ಮಣ್ಣು ಪಾಲಾಗಿದೆ. ಗ್ರಾಮದ ಹಾಲನ್ನು ಸ್ವೀಕರಿಸದಂತೆ ಉತ್ಪಾದಕರ ಸಂಘಕ್ಕೆ ಸೂಚನೆ ನೀಡಿದ್ದಾರೆ. ಸೂಪರ್ ಸೀಡ್ ಆರೋಪ ಕೇಳಿಬಂದಿದೆ ಹಾಗಾಗಿ ಸ್ವೀಕರಿಸುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ನಿನ್ನೆ ಗ್ರಾಮಕ್ಕೆ ಪೊಲೀಸರು ಆಗಮಿಸಿ ಹಾಲು ಉತ್ಪಾದಕ ಸಂಘದ ಬಾಗಿಲಿಗೆ ಬೀಗ ಜಡಿದು ಹೋಗಿದ್ದರು. ಆದ್ರೆ ಮನ್ಮುಲ್ ಮಾಜಿ ನಿರ್ದೇಶಕ ಹಾಗೂ ಒಕ್ಕಲಿಗರ ಸಂಘದ ನಿರ್ದೇಶಕ ನಲ್ಲಿಗೆರೆ ಬಾಲು ನೇತೃತ್ವದಲ್ಲಿ ಬೀಗ ಮುರಿದು ಹಾಲು ಉತ್ಪಾದಕ ಸಂಘ ಪ್ರವೇಶಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸಚಿವ ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ, ಸಹಕಾರ ಸಂಘದ ಎಆರ್ ಗೆ ಸೂಚನೆ ನೀಡಿದ್ದಾರೆ. ಸಚಿವರು ದ್ವೇಷದಿಂದ ಹಾಲು ಖರೀದಿಸದಂತೆ ಮನ್ಮುಲ್ ಗೆ ಸೂಚನೆ ನೀಡಿದ್ದಾರೆ ಎಂದು ಗ್ರಾಮದ ಮಹಿಳೆಯರು ಗಂಭೀರ ಆರೋಪ ಮಾಡಿದ್ದಾರೆ. ನೂತನ ಹಾಲು ಉತ್ಪಾದಕ ಘಟಕದ ಕಟ್ಟಡ ಉದ್ಫಾಟನೆಗೆ ಸಚಿವ ಚಲುವರಾಯಸ್ವಾಮಿಯನ್ನ ಕರೆಯದ ಹಿನ್ನೆಲೆ ಸಚಿವರು ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿ ಹಾಲು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದರು.