ಢಾಕಾ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬಿಕ್ಕಟ್ಟು ಹೆಚ್ಚುತ್ತಿರುವ ಸಂದರ್ಭದಲ್ಲೇ ಭಾರತದ ಎಲ್ಲಾ ಸುದ್ದಿ ವಾಹಿನಿಗಳ ಪ್ರಸಾರಕ್ಕೆ ನಿಷೇಧ ಹೇರಬೇಕು ಎಂದು ಕೋರಿ ಬಾಂಗ್ಲಾದೇಶದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ವಕೀಲ ಎಖ್ಲಾಸ್ ಉದ್ದೀನ್ ಭುಯಾನ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾ ಭಾರತೀಯ ಟಿವಿ ಚಾನೆಲ್ಗಳ ಪ್ರಸಾರವನ್ನು ನಿಷೇಧಿಸಲು ಕೇಬಲ್ ಟೆಲಿವಿಷನ್ ನೆಟ್ವರ್ಕ್ ಆಪರೇಷನ್ ಆಕ್ಟ್ 2006 ರ ಸೆಕ್ಷನ್ 29 ರ ಅಡಿಯಲ್ಲಿ ನಿರ್ದೇಶನ ನೀಡುವಂತೆ ರಿಟ್ ಅರ್ಜಿಯಲ್ಲಿ ಕೋರಲಾಗಿದೆ.
ಸ್ಟಾರ್ ಜಲ್ಶಾ, ಸ್ಟಾರ್ ಪ್ಲಸ್, ಝೀ ಬಾಂಗ್ಲಾ, ರಿಪಬ್ಲಿಕ್ ಬಾಂಗ್ಲಾ ಮತ್ತು ಇತರ ಭಾರತೀಯ ಸುದ್ದಿವಾಹಿನಿಗಳ ಪ್ರಸಾರವನ್ನು ನಿಷೇಧಿಸಲು ರಿಟ್ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಭಾರತೀಯ ಸುದ್ದಿವಾಹಿನಿಗಳಲ್ಲಿ ಪ್ರಚೋದನಕಾರಿ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಬಾಂಗ್ಲಾದೇಶದ ಸಂಸ್ಕೃತಿಯನ್ನು ವಿರೋಧಿಸುವ ವಿಷಯದ ಅನಿಯಂತ್ರಿತ ಪ್ರಸಾರಗಳು ಯುವಜನತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ವಾರ್ತಾ ಸಚಿವಾಲಯ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿಗಳು, ಬಾಂಗ್ಲಾದೇಶ ದೂರಸಂಪರ್ಕ ನಿಯಂತ್ರಣ ಆಯೋಗ (BTRC) ಮತ್ತು ಇತರರನ್ನು ಅರ್ಜಿಯಲ್ಲಿ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧಗಳು ಹದಗೆಟ್ಟಿದೆ. ಜತೆಗೆ ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರಾದ ಹಿಂದೂಗಳ ವಿರುದ್ಧ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ.