ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ನಲ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ಯಶಸ್ವಿ ಜೈಸ್ವಾಲ್ ಈ ವರ್ಷ ಭರ್ಜರಿ ಫಾರ್ಮ್ ನಲ್ಲಿದ್ದು ಪ್ರತಿ ಪಂದ್ಯದಲ್ಲೂ ರನ್ ಕಲೆ ಹಾಕುತ್ತಿದ್ದಾರೆ. ಮೆಲ್ಬರ್ನ್ ಟೆಸ್ಟ್ ನ ಎರಡೂ ಇನಿಂಗ್ಸ್ ಗಳಲ್ಲಿ ಅರ್ಧ ಶತಕ ಸಿಡಿಸಿರುವ ಜೈಸ್ವಾಲ್ ಹೊಸ ದಾಖಲೆ ಬರೆದಿದ್ದಾರೆ. ಜೈಸ್ವಾಲ್ 2024 ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 1478 ರನ್ ಸಿಡಿಸುವ ಮೂಲಕ ಕ್ಯಾಲೆಂಡರ್ ವರ್ಷವೊಂದರಲ್ಲಿ 1400 ಕ್ಕೂ ಹೆಚ್ಚು ರನ್ ಸಿಡಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಜೈಸ್ವಾಲ್ ಆರಂಭಿಕ ಆಟಗಾರನಾಗಿ ಇಷ್ಟು ರನ್ ಸಿಡಿಸಿದ್ದು, ಸೆಹ್ವಾಗ್ ಹೆಸರಿನಲ್ಲಿದ್ದ 1462 ರನ್ ದಾಖಲೆಯನ್ನು ಮುರಿದಿದ್ದಾರೆ.
ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ತೆಂಡುಲ್ಕರ್ 2010 ರಲ್ಲಿ 14 ಪಂದ್ಯಗಳಲ್ಲಿ 23 ಇನಿಂಗ್ಸ್ ನಲ್ಲಿ 1562 ರನ್ ಗಳಿಸಿದ್ದರು. ಇನ್ನು ಜೈಸ್ವಾಲ್ 15 ಪಂದ್ಯಗಳಲ್ಲಿ 29 ಇನಿಂಗ್ಸ್ ಗಳಿಂದ 1478 ರನ್ ಗಳಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಜೈಸ್ವಾಲ್ ದಾಖಲೆಯ ಆಟದ ಕಾರಣದಿಂದಾಗಿ ಸೆಹ್ವಾಗ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದ್ಧಾರೆ. ಇನ್ನು ಸೆಹ್ವಾಗ್ ಮಾತ್ರ 2 ಬಾರಿ 1400 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದಾರೆ. ಉಳಿದಂತೆ ಸುನಿಲ್ ಗವಾಸ್ಕರ್ 1979 ರಲ್ಲಿ 1407 ರನ್ ಗಳಿಸುವ ಮೂಲಕ ಭಾರತದ ಪರ ಮೊತ್ತ ಮೊದಲ ಬಾರಿಗೆ 1400 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದ್ದರು. ಒಟ್ಟಾರೆಯಾಗಿ ನೋಡುವುದಾರೆ ಪಾಕಿಸ್ತನದ ಮೊಹಮ್ಮದ್ ಯೂಸುಫ್ 2006 ರಲ್ಲಿ ಒಟ್ಟು 1788 ರನ್ ಗಳಿಸುವ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತೀಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದಾರೆ.