ಅಡಿಲೇಡ್: ಟೀಂ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಆಸಿಸ್ತಿನ ವರ್ತನೆ ತೋರಿದ್ದು, ಸಮಯಕ್ಕೆ ಸರಿಯಾಗಿ ಬಾರದ ಯುವ ಆಟಗಾರನನ್ನು ಟೀಂ ಬಸ್ ಹೋಟೆಲ್ ನಲ್ಲೇ ಬಿಟ್ಟು ಹೋಗಿದೆ.
ಅಡಿಲೇಡ್ ಟೆಸ್ಟ್ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಬ್ರಿಸ್ಬೇನ್ ನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಅಡಿಲೇಡ್‌ನಿಂದ ಬ್ರಿಸ್ಬೇನ್‌ಗೆ ತೆರಳಬೇಕಿತ್ತು. ಅಡಿಲೇಡ್ನ ಹೋಟೆಲ್ನಿಂದ ಟೀಮ್ ಇಂಡಿಯಾ ಆಟಗಾರರು ಬಸ್ನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಲು ಸಿದ್ಧರಾಗಿದ್ದರು. ಎಲ್ಲಾ ಆಟಗಾರರು ಸಮಯಕ್ಕೆ ಸರಿಯಾಗಿ ಹೋಟೆಲ್ ಲಾಬಿಗೆ ಬಂದರೂ ಯಶಸ್ವಿ ಜೈಸ್ವಾಲ್ ಮಾತ್ರ ಹೋಟೆಲ್ ಲಾಬಿಗೆ ಬಂದಿರಲಿಲ್ಲ. ಜೈಸ್ವಾಲ್‌ಗಾಗಿ ಕಾದು ಹೈರಾಣಾದ ತಂಡ ಯುವ ಆಟಗಾರನನ್ನು ಬಿಟ್ಟು ಟೀಂ ಬಸ್ ತೆರಳಿದೆ.
ಅಡಿಲೇಡ್ನಿಮದ ಬ್ರಿಸ್ಬೇನ್ಗೆ ಬೆಳಗಿನ 10 ಗಂಟೆ ವಿಮಾನದಲ್ಲಿ ಭಾರತ ಕ್ರಿಕೆಟ್ ತಂಡ ಪ್ರಯಾಣಿಸಬೇಕಿತ್ತು. ಹೀಗಾಗಿ ಬೆಳಿಗ್ಗೆ 8.30ಕ್ಕೆ ಹೋಟೆಲ್ನಿಂದ ಎಲ್ಲರೂ ಒಟ್ಟಾಗಿ ಬಸ್ನಲ್ಲಿ ತೆರಳುವುದು ನಿಗದಿಯಾಗಿತ್ತು. ಅಟಗಾರರು ಹಾಗೂ ಸಿಬ್ಬಂದಿಗಾಗಿ ಎರಡು ಬಸ್ಗಳನ್ನು ಮೀಸಲಿರಿಸಲಾಗಿತ್ತು. ಹಾಗಾಗಿ ಹೋಟೆಲ್‌ನ ಲಾಬಿಯಲ್ಲಿ ನಾಯಕ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ಸೇರಿದಂತೆ ತಂಡದ ಸದಸ್ಯರು ಜೈಸ್ವಾಲ್ಗಾಗಿ ಕಾದಿದ್ದರು. ಆದರೆ ಜೈಸ್ವಾಲ್ ಸಕಾಲಕ್ಕೆ ಬಾರದ್ದರಿಂದ ರೋಹಿತ್ ಶರ್ಮಾ ಯುವ ಆಟಗಾರನ ಮೇಲೆ ಕೋಪಗೊಂಡಿದ್ದರು. ವಿಮಾನ ಮಿಸ್ ಆಗುವ ಸಾಧ್ಯತೆ ಇದ್ದಿದ್ದರಿಂದ ತಂಡದ ಆಟಗಾರರು ಜೈಸ್ವಾಲ್ ರನ್ನು ಬಿಟ್ಟು ತೆರಳಿತ್ತು.
ಕೊನೆಗೆ 20 ನಿಮಿಷ ತಡವಾಗಿ ಬಂದ ಜೈಸ್ವಾಲ್ ಕಾರ್ ನಲ್ಲಿ ಏರ್‌ಪೋರ್ಟ್‌ಗೆ ತೆರಳಿ ತಂಡವನ್ನು ಕೂಡಿಕೊಂಡಿದಾರೆ. ಜೈಸ್ವಾಲ್ ತಡವಾಗಿ ಆಗಮಿಸಿದ್ದಕ್ಕೆ ಕಾರಣ ತಿಳಿದುಬಂದಿಲ್ಲ. ಇನ್ನು ಡಿಸೆಂಬರ್ 14 ರಿಂದ ಬ್ರಿಸ್ಬೇನ್ ನಲ್ಲಿ ಮೂರನೇ ಪಂದ್ಯ ಆರಂಭವಾಗಲಿದೆ. ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಂದಿದ್ದ ಟೀಂ ಇಂಡಿಯಾ ಬ್ರಿಸ್ಬೇನ್ ನಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಸರಣಿ ಜಯಿಸಿತ್ತು.