ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್‌ನ ಐದನೇ ಹಾಗೂ ಅಂತಿಮ ದಿನ ಭಾರತ ತಂಡದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ತೀರ್ಪಿಗೆ ಔಟ್ ಆದರು. ಥರ್ಡ್ ಅಂಪೈರ್ ನೀಡಿದ ಈ ತೀರ್ಪು ಈಗ ವಿವಾದಕ್ಕೆ ಕಾರಣವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.
ಭಾರತ ತಂಡ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸುತ್ತಿತ್ತು. ಯಶಸ್ವಿ ಜೈಸ್ವಾಲ್ ತಂಡಕ್ಕೆ ಆಸರೆಯಾಗಿ ಅರ್ಧ ಶತಕ ಗಳಿಸಿ ಆಡುತ್ತಿದ್ದರು. ಆದರೆ 71ನೇ ಓವರ್ನಲ್ಲಿ ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಜೈಸ್ವಾಲ್ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದ್ದರು. ಅಂಪೈರ್ ಔಟ್ ಎಂದು ತೀರ್ಪು ನೀಡಿರಲಿಲ್ಲ. ಆದರೆ ನಾಯಕ ಪ್ಯಾಟ್ ಕಮಿನ್ಸ್ ಡಿಆರ್‌ಎಸ್ ತೆಗೆದುಕೊಂಡಿದ್ದರು.
ವಿಡಿಯೊ ರೀಪ್ಲೇಗಳನ್ನು ಬಹಳ ಹೊತ್ತು ನೋಡಿದ ನಂತರ ಮೂರನೇ ಅಂಪೈರ್ ಸ್ನಿಕ್ಕೋಮೀಟರ್ ಅನ್ನು ಪರಿಶೀಲಿಸಿದರು. ಚೆಂಡು ಎಲ್ಲಿಯೂ ಬ್ಯಾಟ್ ಅಥವಾ ಗ್ಲೌಸ್ಗೆ ತಾಗಿರುವುದು ಕಂಡು ಬಂದಿರಲಿಲ್ಲವೆಂಬುದು ಸ್ಪಷ್ಟವಾಗಿ ಗೋಚರಿಸಿತ್ತು. ಸ್ನಿಕೋ ಮೀಟರ್ನಲ್ಲಿ ಏನೂ ಕಾಣಿಸದ ನಂತರ, ಅಂಪೈರ್ ಮತ್ತೊಮ್ಮೆ ವಿಡಿಯೊವನ್ನು ಮರು ಪರಿಶೀಲಿಸಿದರು ಹಾಗೂ ಚೆಂಡಿನ ಲೈನ್ ಬದಲಾಗಿರುವುದು ತೋರುತ್ತಿರುವ ಹಿನ್ನೆಲೆಯಲ್ಲಿ ಜೈಸ್ವಾಲ್ ಔಟ್ ಎಂದು ತೀರ್ಪು ನೀಡಿದ್ದರು.
ಸಾಮಾನ್ಯವಾಗಿ ಕಾಟ್ ಬಿಹೈಂಡ್ಗೆ ಸಂಬಂಧಿಸಿದ ಗೊಂದಲ ಸನ್ನಿವೇಶ ಎದುರಾದಾಗ ಸ್ನಿಕೋಮೀಟರ್ ಅನ್ನು ಪರಿಗಣಿಸಲಾಗುತ್ತದೆ. ಆದರೆ, ಇಲ್ಲಿ ಮೂರನೇ ಅಂಪೈರ್ ಸ್ನಿಕೋ ಮೀಟರ್ ಅನ್ನು ನಿರ್ಲಕ್ಷಿಸಿ ತೀರ್ಪನ್ನು ನೀಡಿದರು. ಹೀಗಾಗಿ ಮೂರನೇ ಅಂಪೈರ್ನ ಈ ಅಚ್ಚರಿ ನಿರ್ಧಾರ ವಿವಾದವನ್ನು ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪರವಾಗಿ ಥರ್ಡ್ ಅಂಪೈರ್ ತೀರ್ಪು ನೀಡಿದ್ದಾರೆ. ಯಶಸ್ವಿ ಜೈಸ್ವಾಲ್‌ಗೆ ಅನ್ಯಾಯವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕ್ರೀಡಾಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.
ಇನ್ನು ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸಹ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇದು ನಾಟ್‌ಔಟ್ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ತಿಳಿಸಿದ್ಧಾರೆ.