ವೈರಲ್

ಕೊಲೆಗಾರರಿಗೆ‌ ಮಣ್ಣುಮುಕ್ಕಿಸಿದ ಯೋಗ ಟೀಚರ್..!

ಇದೊಂಥರಾ ಸಿನಿಮಾಗೂ ಮೀರಿದ ಸ್ಟೋರಿ. ಯೋಗ ಶಿಕ್ಷಕಿಯ ಕಿಡ್ನಾಪ್ ಮಾಡಿದ್ದ ಗ್ಯಾಂಗ್ ಅರೆಬೆತ್ತಲು ಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿತ್ತು. ನಂತರ ಸೈಲೆಂಟಾಗಿ‌ ಆಕೆಯ ಕತ್ತು‌ಹಿಸುಕಿ ಕೊಲೆ ಮಾಡೋಕೆ ಮುಂದಾಗಿತ್ತು. ಕೊಲೆಗಾರರು ಉಸಿರನ್ನೇ ನಿಲ್ಲಿಸಿಬಿಟ್ಟಾರು ಅನ್ನೋ ಕಾರಣಕ್ಕೆ ಥಟ್ ಅಂತ ಯೋಗ ಶಿಕ್ಷಕಿ ಸತ್ತಂತೆ ನಟಿಸಿದ್ದಳು.

ಚಿಕ್ಕಬಳ್ಳಾಪುರ : ಇದೊಂಥರಾ ಸಿನಿಮಾಗೂ ಮೀರಿದ ಸ್ಟೋರಿ. ಯೋಗ ಶಿಕ್ಷಕಿಯ ಕಿಡ್ನಾಪ್ ಮಾಡಿದ್ದ ಗ್ಯಾಂಗ್ ಅರೆಬೆತ್ತಲು ಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿತ್ತು. ನಂತರ ಸೈಲೆಂಟಾಗಿ‌ ಆಕೆಯ ಕತ್ತು‌ಹಿಸುಕಿ ಕೊಲೆ ಮಾಡೋಕೆ ಮುಂದಾಗಿತ್ತು. ಕೊಲೆಗಾರರು ಉಸಿರನ್ನೇ ನಿಲ್ಲಿಸಿಬಿಟ್ಟಾರು ಅನ್ನೋ ಕಾರಣಕ್ಕೆ ಥಟ್ ಅಂತ ಯೋಗ ಶಿಕ್ಷಕಿ ಸತ್ತಂತೆ ನಟಿಸಿದ್ದಳು. ಶಿಕ್ಷಕಿ ಕೈಲಾಸ ಸೇರಿದ್ಲು ಇನ್ನೇನು ತಡ ಅಂತ ಗುಂಡಿಯನ್ನ ತೋಡಿ ಯೋಗ ಶಿಕ್ಷಕಿಯನ್ನ ಕೊಲೆಗಾರರ ಗ್ಯಾಂಗ್ ಭಯದಲ್ಲೇ ಹೂತುಹಾಕಿತ್ತು. ಆದ್ರೆ, ಯೋಗ ಚೆನ್ನಾಗಿದ್ದ ಯೋಗ ಶಿಕ್ಷಕಿ ಮಣ್ಣನ್ನ ಕೊಡವಿಕೊಂಡು ಸ್ಥಳೀಯರ ಸಹಾಯದಿಂದ ನೆಟ್ಟಗೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣೆಗೆ ಬಂದು ದೂರನ್ನ ನೀಡಿದ್ದಾಳೆ. ಎಚ್ಚೆತ್ತ ಪೊಲೀಸರು ಇದೀಗ ಪ್ರೈವೇಟ್ ಡಿಟೆಕ್ಟಿವ್‌ ಏಜನ್ಸಿಯ ಮಾಲೀಕ ಸತೀಶ್ ರೆಡ್ಡಿ, ರಮಣ, ಸಲ್ಮಾನ್, ರವಿಯ ಕೈಗೆ ಕೈಕೋಳ ಹಾಕಿದ್ದಾರೆ.

ಯೋಗ ಶಿಕ್ಷಕಿ ಮುಗಿಸೋಕೆ‌ ಡೀಲ್

ಹೌದು, ಯೋಗ ಶಿಕ್ಷಕಿಯನ್ನ ಮುಗಿಸಲು ಸತೀಶ್ ರೆಡ್ಡಿ ಸುಪಾರಿಯನ್ನ ಪಡೆದಿದ್ದನಂತೆ. ಮೂಲತಃ ದೇವನಹಳ್ಳಿಯವರಾದ ಯೋಗ ಶಿಕ್ಷಕಿ ಪತಿಯಿಂದ ವಿಚ್ಚೇದನ ಪಡೆದು ಒಂಟಿಯಾಗಿದ್ದರು. ಒಂಟಿಯಾದ ಮೇಲೆ ಸಂತೋಷ‌ ಎಂಬಾತನ ಜತೆ ಚಿಕ್ಕದಾಗಿ ಲವ್ ಆಗಿತ್ತಂತೆ. ಈ ಲವ್ವಿನ ವಿಚಾರ ಸಂತೋಷನ ಹೆಂಡತಿಗೆ ತಿಳಿದು ಕೊಲೆಗಾರ ಸತೀಶ್ ರೆಡ್ಡಿಗೆ ಯೋಗ ಶಿಕ್ಷಕಿಯನ್ನ ಮುಗಿಸುವಂತೆ ಸುಪಾರಿಯನ್ನ ನೀಡಲಾಗಿತ್ತಂತೆ. ಸುಪಾರಿ ಪಡೆದ ಸತೀಶ ಯೋಗ ಶಿಕ್ಷಕಿಯ ಬಳಿ ಯೋಗ ಕಲಿಯೋ ರೀತಿ ಹೋಗಿದ್ದ. ನಂತರ ರಿವಾಲ್ವಾರ್ ಟ್ರೈನಿಂಗ್ ಕೊಡ್ತೀನಿ ಅಂತ ಯೋಗ ಶಿಕ್ಷಕಿಯ ಮನೆಯಲ್ಲೇ ಕಾಲ ಕಳೆಯುತ್ತಿದ್ದ. ಹೀಗಿದ್ದವ್ನು ತನ್ನ ಗ್ಯಾಂಗ್ ನ ಸೇರಿಸಿಕೊಂಡು ಯೋಗ ಶಿಕ್ಷಕಿಯನ್ನ ಸೈಲೆಂಟಾಗಿ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದ.

ಯೋಗ ಶಿಕ್ಷಕಿಯ ಅಪಹರಣ ಮಾಡಿ ಅರೆಬೆತ್ತಲುಗೊಳಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದ ಸತೀಶನ‌ ಗ್ಯಾಂಗ್ ಶಿಕ್ಷಕಿಯ ಕೂಗಾಟ ಕೇಳಿ ಆಕೆಯ ಕತ್ತು ಹಿಸುಕಿ ಉಸಿರುಗಟ್ಟಿಸೋಕೆ ಮುಂದಾಗಿದ್ದರು. ಕೊಲೆ ಮಾಡೇ ಬಿಡ್ತಾರೆ ಅಂತ ತಿಳಿದ ಯೋಗ ಶಿಕ್ಷಕಿ ಉಸಿರು ಬಿಗಿಹಿಡಿದು ಸತ್ತೇ ಬಿಟ್ಟೆ ಅನ್ನೋ ರೀತಿ ಮಲಗಿದ್ದಳು. ಕೊಲೆಗಾರರು ಬಂದ ಕೆಲಸ ಮುಗೀತು ಅಂತ ಗುಂಡಿ ತೋಡಿ ಯೋಗ ಶಿಕ್ಷಕಿಯನ್ನ ಅರೆಬರೆಯಾಗಿ ಹೂತುಬಿಟ್ಟು ಕಾಲ್ಕಿತ್ತಿದ್ದರು. ಆದ್ರೆ, ಯೋಗ ಯೋಗದಲ್ಲಿದ್ದ ಯೋಗ ಶಿಕ್ಷಕಿ ಊರವರ ಸಹಾಯ ಪಡೆದು ಪೊಲೀಸರ ಮುಂದೆ ಬಂದು ನಿಂತುಬಿಟ್ಟಿದ್ದಳು. 

ಸದ್ಯ, ದಿಬ್ಬೂರಹಳ್ಳಿ ಪೊಲೀಸರು ಸುಪಾರಿ ಗ್ಯಾಂಗನ್ನ ಬಂಧಿಸಿದ್ದು ಹೆಚ್ಚಿನ ವಿಚಾರಣೆ ಕೈಗೊಂಡಿದೆ.