ಚಿಕ್ಕಬಳ್ಳಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೂನೇಗಲ್ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹೆದ್ದಾರಿಯಲ್ಲಿ ನಾಯಿಯೊಂದು ಸತ್ತು ಬಿದ್ದಿದ್ದು, ರಸ್ತೆಯಲ್ಲಿ ಸತ್ತು ಬಿದ್ದಿದ್ದ ನಾಯಿಯನ್ನು ರಸ್ತೆಯಿಂದ ಎತ್ತಲು ಹೋದ ಯುವಕ ದಾರುಣವಾಗಿ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಮೃತ ವ್ಯಕ್ತಿಯನ್ನು ಸಾಮಸೇನಹಳ್ಳಿ ಗ್ರಾಮದ ಪ್ರಭು (30) ವರ್ಷ ಎಂದು ಗುರುತಿಸಲಾಗಿದೆ.
ಹೌದು, ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹೆದ್ದಾರಿಯಲ್ಲಿ ನಾಯಿಯೊಂದು ಸತ್ತು ಬಿದ್ದಿತ್ತು. ಇದನ್ನು ನೋಡಿದ ಯುವಕರು ಬೈಕ್ ನಿಲ್ಲಿಸಿ ರಸ್ತೆಯಿಂದ ನಾಯಿಯನ್ನು ತೆಗೆಯಲು ಮುಂದಾಗಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಯುವಕನಿಗೆ ಡಿಕ್ಕಿ ಹೊಡೆದು ನಂತರ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಟಿಪ್ಪರ್ ಲಾರಿ ಚಾಲಕನ ಅಜಾಗರುಕತೆಯಿಂದ ಸರಣಿ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದೆ.
ಅಪಘಾತದಲ್ಲಿ ಮಲ್ಲೇನಹಳ್ಳಿಯ ಕಾರ್ತಿಕ್ ಎನ್ನುವಾತನಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಸ್ಕಾರ್ಪಿಯೋ ಕಾರು ಹಾಗೂ ಬೈಕ್ ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.